ಚಿತ್ರದುರ್ಗದ ಜಮೀನಿನಲ್ಲಿ ಉರಗ ಪ್ರತ್ಯಕ್ಷ; ನಾಗರಹಾವಿನ 25 ಮೊಟ್ಟೆ ಮತ್ತು 21 ಮರಿಯ ಸಂರಕ್ಷಣೆ
ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಉರಗ ತಜ್ಞ ಶಿವು ಸ್ಥಳಕ್ಕೆ ಆಗಮಿಸಿದ್ದು, ನಾಗರಹಾವಿನ 21ಮರಿಗಳು ಮತ್ತು 25ಕ್ಕೂ ಹೆಚ್ಚು ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ.
ಚಿತ್ರದುರ್ಗ: ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿದ್ದು, ಅವುಗಳು ಪ್ರಾಣಾಪಾಯಕ್ಕೆ ಸಿಲುಕಿದ ಅದಷ್ಟೋ ಸನ್ನಿವೇಶವನ್ನು ನಾವು ಓದಿದ್ದೇವೆ. ಆದರೆ ಸಾಮಾನ್ಯವಾಗಿ ಹಾವುಗಳು ನಾಡಿನಲ್ಲಿಯೂ ಆಗಾಗ ಕಾಣಸಿಗುತ್ತಿರುತ್ತದೆ. ಇದೇ ರೀತಿ ಸನ್ನಿವೇಶ ಇಂದು ಕೂಡ ನಡೆದಿದ್ದು, ಜಮೀನು ಸ್ವಚ್ಛಗೊಳಿಸುವ ವೇಳೆ ನಾಗರಹಾವಿನ ಮರಿಗಳು ಮತ್ತು ಮೊಟ್ಟೆಗಳು ಪತ್ತೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಓಬಳಾಪುರದಲ್ಲಿ ನಡೆದಿದೆ. ಆರ್.ಕೆ.ಸ್ವಾಮಿ ಎಂಬುವರು ಜೆಸಿಬಿಯಿಂದ ಜಮೀನು ಸ್ವಚ್ಛಗೊಳಿಸುತ್ತಿದ್ದು, ಭೂಮಿಯನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ಮಣ್ಣಿನಡಿ ಹಾವಿನ ಮರಿ ಮತ್ತು ಮೊಟ್ಟೆಗಳು ಕಂಡು ಬಂದಿವೆ.
ಕೂಡಲೇ ಈ ವಿಷಯದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಉರಗ ತಜ್ಞ ಶಿವು ಸ್ಥಳಕ್ಕೆ ಆಗಮಿಸಿದ್ದು, ನಾಗರಹಾವಿನ 21ಮರಿಗಳು ಮತ್ತು 25ಕ್ಕೂ ಹೆಚ್ಚು ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ. ಬಳಿಕ ಅದೇ ಜಮೀನಿನಲ್ಲಿದ್ದ ಎರಡು ನಾಗರಹಾವುಗಳನ್ನು ಸಹ ಸೆರೆ ಹಿಡಿದಿದ್ದಾರೆ.
ಸದ್ಯ ಹಾವುಗಳು ಮತ್ತು ಮೊಟ್ಟೆಗಳನ್ನು ಸಂರಕ್ಷಿಸಿಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ನಾಗರಹಾವು, ಮರಿ ಮತ್ತು ಮೊಟ್ಟೆ ಕಾಡಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಿದ್ದಾರೆ. ಚಿತ್ರದುರ್ಗ ಬಳಿಯ ಜೋಗಿಮಟ್ಟಿ ಅರಣ್ಯದ ಒಂದು ಭಾಗದಲ್ಲಿ ಹಾವುಗಳು ಮತ್ತು ಮೊಟ್ಟೆಗಳನ್ನು ಒಟ್ಟಿಗೆ ಬಿಡುವ ಬಗ್ಗೆ ಚಿಂತನೆ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಖಚಿತ ತೀರ್ಮಾನ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ:
ಮೈಸೂರು: ಕೃತಕ ಕಾವು ಮೊಟ್ಟೆಯಿಂದ ಹೊರಬಂದ ಹಾವಿನ ಮರಿಗಳು; ಅಪರೂಪದ ದೃಶ್ಯ ಸೆರೆ
ಚಲಿಸುತ್ತಿರುವ ಬೈಕ್ ಹ್ಯಾಂಡಲ್ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ