ಚಿತ್ರದುರ್ಗ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್ ಅಂದಾಕ್ಷಣ ಎಂಥವರಿಗೂ ಬೆರಗು ಮೂಡಿಸುತ್ತದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಬಾಲಕನೋರ್ವ ಭಗತ್ ಸಿಂಗ್ ಪಾತ್ರದ ರಿಹರ್ಸಲ್ ವೇಳೆ ಆಕಸ್ಮಿಕವಾಗಿ ನೇಣಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೆಳಗೋಟೆ ಲೇಔಟ್‌ನ ಸಂಜಯ್ SLV ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯ ಸಂಜಯ್‌ಗೌಡ(12) ಮೃತ ಬಾಲಕ.
ನವೆಂಬರ್ 01 ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ SLV ಶಾಲೆಯಲ್ಲಿ ಭಗತ್ ಸಿಂಗ್ ಪಾತ್ರ ನಿರ್ವಹಣೆಗೆ ಶಾಲಾ ಸಿಬ್ಬಂದಿ ಸೂಚಿಸಿದ್ದರು. ಶಾಲೆಯಲ್ಲಿ ಪ್ರಾಕ್ಟೀಸ್ ಸಹ ಮಾಡಿಸಿದ್ದರು. ಆದ್ರೆ, ತಂದೆ ತಾಯಿ ಟೀಸ್ಟಾಲ್ ಗೆ ಹೋಗಿದ್ದ ವೇಳೆ ನಿನ್ನೆ (ಅಕ್ಟೋಬರ್ 30) ಸಂಜೆ ವೇಳೆ ಸಂಜಯ್ ಗೌಡ ಮತ್ತೆ ಮನೆಯಲ್ಲಿ ಪ್ರಾಕ್ಟೀಸ್ ಗೆ ಮುಂದಾಗಿದ್ದಾನೆ. ಮನೆಯಲ್ಲಿದ್ದ ಫ್ಯಾನ್ ಹಾಕುವ ಕಬ್ಬಿಣದ ಸಲಾಕೆಗೆ ನೂಲಿನ ಹಗ್ಗ ಹಾಕಿ ಗಲ್ಲಿನ ಮಾದರಿ ಬಿಗಿದಿದ್ದಾನೆ. ಬಳಿಕ ಮಂಚದ ಮೇಲೆ ನಿಂತು ಭಗತ್ ಸಿಂಗ್ ಡೈಲಾಗ್ ಹೇಳುತ್ತ ನೇಣಿಗೆ ಕೊರಳೊಡ್ಡಿದ್ದಾನೆ. ಆದ್ರೆ, ಭಗತ್ ಸಿಂಗ್ ಮೈದುಂಬಿಕೊಂಡಿದ್ದ ಬಾಲಕ ನೇಣಿಗೆ ಕೊರಳೊಡ್ಡಿ ಮಂಚದ ಮೇಲಿಂದ ಮುಂದಕ್ಕೆ ಜಿಗಿದಿದ್ದಾನೆ. ಆಗ ನೇಣು ಬಿಗಿದು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಪೋಷಕರು ಮನೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು
ಇನ್ನು ಬಾಲಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡಾಕ್ಷಣ ಉಳಿಸಿಕೊಳ್ಳಬಹುದೆಂದು ಭಾವಿಸಿ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದ್ರೆ, ಜಿಲ್ಲಾಸ್ಪತ್ರೆಯ ವೈದ್ಯರು ಸಂಜಯ್ ಗೌಡ ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ.
ನಾಗರಾಜ್ ಮತ್ತು ಭಾಗ್ಯಲಕ್ಷ್ಮೀ ದಂಪತಿ ಡಿಸಿ ಕಚೇರಿ ಬಳಿ ಟೀಸ್ಟಾಲ್ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿಗೆ ಉತ್ತಮ ವಿದ್ಯಭ್ಯಾಸ ಕೊಡಿಸುವ ಕನಸು ಕಟ್ಟಿಕೊಂಡಿದ್ದರು. ಅಂತೆಯೇ ಮೊದಲ ಮಗಳು ಹೊಳಲ್ಕೆರೆಯ ರಾಮಗಿರಿ ಗ್ರಾಮದ ಬಳಿಯ ಮುರಾರ್ಜಿ ಶಾಲೆಯಲ್ಲಿ 10ನೇ ತರಗತಿ ವಿದ್ಯಭ್ಯಾಸ ಮಾಡುತ್ತಿದ್ದಾಳೆ. ಎರಡನೇ ಪುತ್ರ ಸಂಜಯ್ ಗೌಡ್ (12) ಚಿತ್ರದುರ್ಗ ನಗರದ ಎಸ್ ಎಲ್ ವಿ ಶಾಲೆಯಲ್ಲಿ 7ನೇ ತರಗತಿ ವಿದ್ಯಭ್ಯಾಸ ಮಾಡುತ್ತಿದ್ದನು. ಓದುವುದರಲ್ಲೂ ಚುರುಕಾಗಿದ್ದ ಸಂಜಯ್ ನಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದನು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಗಮನ ಸೆಳೆದಿದ್ದನು.
ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ಮಾಡಲು ಹೋಗಿದ್ದೇ ದುರಂತಕ್ಕೆ ಕಾರಣವಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Published On - 3:31 pm, Sun, 30 October 22