Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?

ಕೋಟೆನಾಡಿನ ಆ ಪೋರನಿಗಿನ್ನೂ ಏಳು ವರ್ಷವೂ ಪೂರ್ಣಗೊಂಡಿಲ್ಲ. ಆದ್ರೆ, ಆ ಹುಡುಗನ ಟ್ಯಾಲೆಂಟ್ ಕಂಡರೆ, ನೀವು ಹುಬ್ಬೇರಿಸುವುದು ಗ್ಯಾರಂಟಿ. 2ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಆ ಜಾಣ ಬಾಲಕ ಫಟಾಫಟ್ ಎಂದು ಉತ್ತರ ಹೇಳುತ್ತಾನೆ. ಹೀಗಾಗಿ, ಚಿಕ್ಕ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ದಾಖಲಿಸಿದ್ದಾನೆ. ಯಾರು ಆ ಬಾಲಕ ಅಂತೀರಾ? ಇಲ್ಲಿದೆ ನೋಡಿ.

Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?
ಬಾಲಕ ಹೇಮಂತ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2023 | 12:29 PM

ಚಿತ್ರದುರ್ಗ, ಜು.23: ರಾಮಾಯಣ(Ramayana), ಮಹಾಭಾರತ(Mahabharata)ದ ಕುರಿತ ಪ್ರಶ್ನೋತ್ತರಗಳಿಗೂ ಸೈ. ಸಾಮಾನ್ಯಜ್ಞಾನ (General knowledge )ದ ಪ್ರಶ್ನೋತ್ತರಗಳಿಗೂ ಜೈ. ಯಾವುದೇ ಪ್ರಶ್ನೆ ಕೇಳಿದ್ರೂ, ಫಟಾಫಟ್ ಉತ್ತರಿಸುವ ಜಾಣ ಬಾಲಕ. ಹೌದು, ಚಿತ್ರದುರ್ಗ (Chitradurga) ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ, ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ಚಿಕ್ಕ ಎಂಬ ಬಾಲಕ ಚಿಕ್ಕವಯಸ್ಸಿನಲ್ಲೇ ತನ್ನ ಜಾಣ್ಮೆ ಮೂಲಕ ಗಮನಸೆಳೆಯುತ್ತಿದ್ದಾನೆ. ಒಂದು ಸಲ ಹೇಳಿದ್ರೆ, ಸಾಕು ಹೇಮಂತ್ ತನ್ನ ಸ್ಮೃತಿ ಪಟಲದಲ್ಲಿ ಮರೆಯದೇ ಸೇವ್ ಮಾಡಿಕೊಂಡು ಬಿಡುತ್ತಾನೆ. ಈಗ ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆ ಜೊತೆಗೆ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಹೀಗಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಡ್ ರೆಕಾರ್ಡ್ ದಾಖಲಿಸಿದ್ದಾನೆಂದು ಹೇಮಂತ್ ತಾಯಿ ಶೃತಿಯವರು ಹೇಳುತ್ತಾರೆ.

ಇನ್ನು ಈ ಟ್ಯಾಲೆಂಟೆಡ್ ಬಾಯ್ ಹೇಮಂತ್ ಸದ್ಯ ಎರಡನೇ ತರಗತಿ ಓದುತ್ತಿದ್ದಾನೆ. ಆದ್ರೆ, ವಯಸ್ಸಿಗೆ ಮೀರಿದ ಬುದ್ಧಿವಂತಿಕೆ, ಮೆಮೊರಿ ಪವರ್ ಹೊಂದಿದ್ದಾನೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಪ್ರತಿ ಪಾತ್ರಗಳ ಹೆಸರನ್ನೂ ಹೇಳುತ್ತಾನಲ್ಲದೆ, ಪ್ರತಿ ಪ್ರಶ್ನೋತ್ತರಗಳಿಗೂ ಫಟಾಫಟ್ ಉತ್ತರ ನೀಡುತ್ತಾನೆ. ವಿವಿಧ ದೇಶ, ರಾಜಧಾನಿಗಳ ಹೆಸರು, ಗಾದೆಗಳು, ದೇಶದ ರಾಜಧಾನಿಗಳು, ಕರ್ನಾಟಕದ ಜಿಲ್ಲೆಗಳ ಹೆಸರು, ವಿಜ್ಞಾನಿಗಳು ಮತ್ತು ಸಂಶೋಧನೆಗಳು, ನದಿಗಳು, ಸಂವತ್ಸರಗಳು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.

ಇದನ್ನೂ ಓದಿ: India Book of Records ಗೆ ದಾಖಲು! ಧಾರವಾಡದ ಈ ಬಾಲಕಿಯ ಸಾಧನೆ ಏನು ಗೊತ್ತಾ?

ಇನ್ನು ಈ ಬಾಲಕ ಇಂಡಿಯನ್ ಆರ್ಮಿಗೆ ಸೇರಿ ಸೇವೆ ಸಲ್ಲಿಸುವ ಕನಸು ಹೊಂದಿದ್ದಾನೆ. ಮಗನ ಜಾಣ್ಮೆ, ಸಾಧನೆ ಕಂಡು ಪೋಷಕರು ದಿಲ್​ ಖುಷ್ ಆಗಿದ್ದಾರೆ. ಅಂತೆಯೇ ಮಗ ತನ್ನ ಕನಸಿನಂತೆ ಮುನ್ನಡೆದು ಸಾಧಿಸಲಿ ಎಂಬ ಆಶಯ ಹೊಂದಿದ್ದಾರೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ ಮತ್ತು ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ವಿಶೇಷ ಟ್ಯಾಲೆಂಟ್ ಮೂಲಕ ಗಮನ ಸೆಳೆದಿದ್ದಾನೆ. ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಲ್ಡ್ ರೆಕಾರ್ಡ್ ಸೇರಿದ್ದು, ಹೆತ್ತವರಿಗೆ ಮಾತ್ರವಲ್ಲದೆ ದುರ್ಗಕ್ಕೆ ಕೀರ್ತಿ ತಂದಿದ್ದಾನೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Sun, 23 July 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us