AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವಿಂಗ್ ರಿಲೇಷನ್​ಶಿಪ್​: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ, ಜಾಲಿ ಜಾಲಿ ಎಂದವರು ಜೈಲಿಗೆ

ಕೋಟೆನಾಡು ಚಿತ್ರದುರ್ಗದಲ್ಲಿ ಹಾಡುಹಗಲೇ ವ್ಯಕ್ತಿಯ ಭೀಕರ ಹತ್ಯೆ ನಡೆದಿದ್ದು, ಹತ್ಯೆಗೈದ ಆರೋಪಿಗಳು ಇನ್ಸ್ಟಾಗ್ರಾಮ್ ಸ್ಟೇಟಸ್ ಬೇರೆ ಹಾಕಿ ವಿಕೃತಿ ಮೆರೆದಿದ್ದಾರೆ. ಇದು ಜನರಲ್ಲಿ ಭೀತಿ ಸೃಷ್ಟಿಸಿದೆ. ಸದ್ಯ ಖಾಕಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಯಲ್ಲಿ ಆರೋಪಿಗಳು ಸ್ಫೋಟಕ ಕಾರಣ ಬಿಚ್ಚಿಟ್ಟಿದ್ದಾರೆ. ಪ್ರಿಯತಮೆ ದೂರಾದಬಳಿಕವೂ ಬೆನ್ನುಬಿದ್ದು ಕಾಡಿದ್ದೇ ಕೊಲೆಗೆ ಕಾರಣ ಎನ್ನುವುದು ಸ್ಫೋಟಕ ಅಂಶ ಬಯಲಾಗಿದೆ.

ಲಿವಿಂಗ್ ರಿಲೇಷನ್​ಶಿಪ್​: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ, ಜಾಲಿ ಜಾಲಿ ಎಂದವರು ಜೈಲಿಗೆ
Hosadurga Murder Case
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jun 25, 2025 | 5:56 PM

Share

ಚಿತ್ರದುರ್ಗ, (ಜೂನ್ 25): ಹಾಡುಹಗಲೇ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ. ಕೊಲೆಗೈದು ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಆರೋಪಿಗಳು ಅಂದರ್. ಪ್ರಿಯತಮೆ ದೂರಾದ ಬಳಿಕವೂ ಬೆನ್ನುಬಿದ್ದು ಕಾಡಿದ್ದೇ ಕೊಲೆಗೆ ಕಾರಣ. ಹೌದು, ಚಿತ್ರದುರ್ಗ (Chitradruga) ಜಿಲ್ಲೆ ಹೊಸದುರ್ಗ (Hosdurga) ತಾಲೂಕಿನ ಹುಣವಿನಡು ಗ್ರಾಮದ ರಾಜೇಂದ್ರ ಶ್ರೀನಿವಾಸ್(30) ನಿನ್ನೆ (ಜೂನ್ 25) ಬೆಳಗ್ಗೆ 11ಗಂಟೆಗೆ ಮನೆಯ ಬಾತ್ ರೂಂನಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ದಾಖಿಸಿಕೊಂಡ ಹೊಸದುರ್ಗ ಠಾಣೆ ಪೊಲೀಸರು, ಕಾರ್ಯಚರಣೆ ನಡೆಸಿ ಕೊನೆಗೆ ಹಂತಕರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿಚಾರಣೆಯಲ್ಲಿ ಆರೋಪಿಗಳು ಕೊಲೆಗೆ ಕಾರಣವನ್ನು ಬಿಚ್ಚಿಟ್ಟಿದ್ದು, ಪ್ರಿಯತಮೆ ದೂರಾದ ಬಳಿಕವೂ ಆಕೆಯ ಬೆನ್ನುಬಿದ್ದಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಪ್ರೇಯಸಿ ದೂರಾದ ಬಳಿಕವೂ ಬೆನ್ನುಬಿದ್ದು ಕೊಲೆಯಾದ

ಆಟೋ ಚಾಲಕನಾಗಿದ್ದ ರಾಜೇಂದ್ರ, ಹೊಳಲ್ಕೆರೆ ತಾಲೂಕಿನ ದಾಸಿಕಟ್ಟೆ ಮೂಲದ ಕಿರಣಾ ಎಂಬ ವಿವಾಹಿತ ಮಹಿಳೆಯ ಜತೆ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದ. ಕೆಲ ತಿಂಗಳಕಾಲ ಚಿತ್ರದುರ್ಗದಲ್ಲಿ ವಾಸವಾಗಿದ್ದು ಇಪ್ಪತ್ತು ದಿನಗಳ ಹಿಂದಷ್ಟೇ ಕಿರಣಾ , ರಾಜೇಂದ್ರನ ಜತೆಗಿನ ಭಿನ್ನಾಭಿಪ್ರಾಯದಿಂದ ದೂರಾಗಿದ್ದಳು. ಆದ್ರೆ, ಅದೇ ಕಾರಣಕ್ಕೆ ಕಿರಣಾಳ ಸಹೋದರ ಸಾಗರ್, ಅಭಿಷೇಕ್ ಮತ್ತು ಸಂಬಂಧಿಕರು ಸೇರಿ ಹತ್ಯೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ

ವಿವಾಹಿತೆಯಾದ ಕಿರಣಾಳ ಜತೆ ಲಿವಿಂಗ್ ರಿಲೇಷನ್ ಹೊಂದಿದ್ದ ರಾಜೇಂದ್ರನಿಂದ ಕೆಲ ದಿನಗಳ ಹಿಂದೆ ಕಿರಣಾ ದೂರಾಗಿದ್ದಳು. ಆದ್ರೆ, ರಾಜೇಂದ್ರ ಮಾತ್ರ ಆಕೆಯ ಹಿಂದೆಯೇ ಬಿದ್ದಿದ್ದ. ಅಲ್ಲದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಕುಟುಂಬಸ್ಥರಿಗೂ ಪ್ರಚೋದನೆ ಮಾಡಿದ್ದ. ಹೀಗಾಗಿ, ಕಿರಣಾಳನ್ನು ಬಳಸಿಕೊಂಡು ಮೋಸ ಮಾಡಿದ್ದಲ್ಲದೆ ಮತ್ತೆ ಕಿರಿಕ್ ಮಾಡುತ್ತಿರುವ ಕಾರಣಕ್ಕೆ ರೊಚ್ಚಿಗೆದ್ದ ಸಹೋದರರು ಇತರರ ಜತೆ ಸೇರಿ ಕೊಲೆ ಮಾಡಿದ್ದಾರೆಂದು ತನಿಖೆ ವೇಳಿ ತಿಳಿದಿದೆ. ಕೊಲೆ ಬಳಿಕ ಆರೋಪಿಗಳು ಇನ್ಸ್ಟಾಗ್ರಾಮ್ ನಲ್ಲಿ ಕೊಲೆಯಾದ ರಾಜೇಂದ್ರ ಶವದ ಫೋಟೋ ಶೇರ್ ಮಾಡಿದ್ದನ್ನು ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.

ಬೆಂಗಳೂರಿನಿಂದ ಬಂದು ಹತ್ಯೆ

ನಿನ್ನೆ (ಜೂನ್ 25) ಮನೆಯಲ್ಲಿ ಕಿರಣ್ ಒಬ್ಬನೇ ಇರುವುದನ್ನು ಗಮನಿಸಿ ಏಕಾಏಕಿ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು. ರಣಭೀಕರವಾಗಿ ರಾಜೇಂದ್ರನನ್ನು ಕೊಂದ ಬಳಿಕ ಸಾಗರ್ & ಅಭಿಷೇಕ್ ಗ್ಯಾಂಗ್ ಎಸ್ಕೇಪ್ ಆಗಿತ್ತು. ಆದ್ರೆ, ಸಾಗರ್ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಕೊಲೆಯಾದ ರಾಜೇಂದ್ರನ ಮೃತದೇಹದ ಫೋಟೋ ಹಾಕಿ ಜಾಲಿ ಜಾಲಿ ಎಂದು ಬರೆದುಕೊಂಡಿದ್ದ. ಸದ್ಯ ಡಿವೈಎಸ್ಪಿ ಶಿವಕುಮಾರ್, ಸಿಪಿಐ ರಮೇಶ್ ಅಂಡ್ ಟೀಮ್ ಬೆಳಕಾಗುವುದರೊಳಗೆ ಆರೋಪಿಗಳನ್ನು ಬಂಧಿಸಿದೆ. ಕಿರಣಾಳ ಸಹೋದರರಾದ ಸಾಗರ್, ಅಭಿಷೇಕ್, ಸಂಬಂಧಿಕರಾದ ಕಿರಣ್ ಕುಮಾರ್, ಹೊಸದುರ್ಗ ಮೂಲದ ಕೃಷ್ಣಮೂರ್ತಿ ಹಾಗೂ ಕೊಲೆಗೆ ಸಹಕರಿಸಿದ ಸಂಜು, ಕರಿಯಪ್ಪ, ಯಶವಂತ್ ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಕಿರಣಾಳ ಸಹೋದರರಾದ ಸಾಗರ್, ಅಭಿಷೇಕ್ ಮತ್ತು ಕಿರಣ್ ಕುಮಾರ್ ಬೆಂಗಳೂರಲ್ಲಿ ಆಟೋ ಚಾಲಕರಾಗಿದ್ದರು. ರಾಜೇಂದ್ರ ಕೊಲೆಗೆಂದೆ ಸ್ಕೆಚ್ ಹಾಕಿ ಹೊಸದುರ್ಗಕ್ಕೆ ಬಂದಿದ್ದು ಸಂಬಂಧಿಕರ ಸಹಕಾರ ಪಡೆದು ಮೂವರು ರಾಜೇಂದ್ರ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ.

ಕಿರಣಾಳನ್ನು ಚನ್ನಾಗಿಯೇ ನೋಡಿಕೊಂಡಿದ್ದ. ಕೆಲವೊಮ್ಮೆ ಕುಡಿಯುತ್ತಿದ್ದನೆಂಬ ಕ್ಷುಲ್ಲಕ ಕಾರಣಕ್ಕೆ ಕಿರಣಾ ಬಿಟ್ಟು ಹೋಗಿದ್ದಾಳೆ ಎಂದು ಮೃತ ರಾಜೇಂದ್ರನ ಅತ್ತಿಗೆ ಆರೋಪಿಸಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹುಣವಿನಡು ಗ್ರಾಮದಲ್ಲಿ ನಡೆದ ರಣಭೀಕರ ಕೊಲೆ ದುರ್ಗವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಕೃರ ಹಂತಕರನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.