AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Betel leaf growers: ಬೆವರು ಸುರಿಸಿ ಏಳೆಂಟು ವರ್ಷದಿಂದ ಕಾಯ್ದುಕೊಂಡಿದ್ದ ವೀಳ್ಯದೆಲೆ ಬೆಳೆ ವಿಪರೀತ ಶೀತ ವಾತಾವರಣದಿಂದ ಹಾಳು, ಸಂಕಷ್ಟದಲ್ಲಿ ರೈತರು

chitradurga: ರೈತರು ಇಷ್ಟೆಲ್ಲಾ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದರೂ ಸಹ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರತ್ತ ಸುಳಿದಿಲ್ಲ. ಪರಿಹಾರ ಮಾರ್ಗೋಪಾಯ ಸೂಚಿಸುವ ಕೆಲಸವನ್ನು ಮಾಡಿಲ್ಲ.

Betel leaf growers: ಬೆವರು ಸುರಿಸಿ ಏಳೆಂಟು ವರ್ಷದಿಂದ ಕಾಯ್ದುಕೊಂಡಿದ್ದ ವೀಳ್ಯದೆಲೆ ಬೆಳೆ ವಿಪರೀತ ಶೀತ ವಾತಾವರಣದಿಂದ ಹಾಳು, ಸಂಕಷ್ಟದಲ್ಲಿ ರೈತರು
ಬೆವರು ಸುರಿಸಿ ಕಾಯ್ದುಕೊಂಡಿದ್ದ ವೀಳ್ಯದೆಲೆ ಬೆಳೆ ವಿಪರೀತ ಶೀತ ವಾತಾವರಣದಿಂದ ಹಾಳು
TV9 Web
| Edited By: |

Updated on:Jan 31, 2023 | 2:48 PM

Share

ವೀಳ್ಯದೆಲೆ ಬೆಲೆ ದುಬಾರಿಯಾಗಿದ್ದು ಸದ್ಯ ಭಾರೀ ಡಿಮ್ಯಾಂಡ್ ಬಂದಿದೆ. ಆದ್ರೆ, ಶೀತ ವಾತಾವರಣದ ಪರಿಣಾಮ ಬಹುತೇಕ ಕಡೆ ವೀಳ್ಯದೆಲೆ ಬೆಳೆ (betel leaf crop) ಹಾನಿ ಆಗಿದೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಶೀತ ವಾತಾವರಣದಿಂದ ಹಾಳಾಗಿರುವ ವೀಳ್ಯದೆಲೆ ಬೆಳೆ. ಮದುವೆ ಸೀಸನ್ ಸಂದರ್ಭದಲ್ಲೇ ವೀಳ್ಯದೆಲೆ ಬೆಳೆ ಹಾನಿ. ವೀಳ್ಯದೆಲೆ ಬೆಲೆ ದುಬಾರಿಯಾಗಿ ಭಾರೀ ಡಿಮ್ಯಾಂಡ್ ವೇಳೆ ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ (Betel leaf growers). ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (chitradurga) ತಾಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ.

ಹೌದು, ಚಿತ್ರದುರ್ಗದ ಜೆ.ಎನ್.ಕೋಟೆ, ದೊಡ್ಡ ಸಿದ್ದವ್ವನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮ ಸೇರಿ ವಿವಿಧೆಡೆ ನೂರಾರು ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಈ ವರ್ಷ ಶೀತ ವಾತಾವರಣದಿಂದ ಬಹುತೇಕ ಕಡೆ ವೀಳ್ಯದೆಲೆ ಬೆಳೆ ಹಾನಿಗೊಳಗಾಗಿದೆ. ಇದೇ ವೇಳೆ ವೀಳ್ಯದೆಲೆ ನೂರರ ಕಟ್ಟಿಗೆ 200 ರೂ. ಸಾವಿರದ ಕಟ್ಟಿಗೆ 2000 ರೂಪಾಯಿಯಷ್ಟು ದುಬಾರಿ ಆಗಿದೆ. ಇಳುವರಿ ಕುಂಠಿತವಾಗಿರುವ ಕಾರಣ ಮುಂಬರುವ ಮದುವೆ ಸೀಸನ್ ನಲ್ಲಿ ವೀಳ್ಯದೆಲೆ ದರ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ರೆ, ವೀಳ್ಯದೆಲೆ ಬೆಳೆಗಾರರು ಏಳೆಂಟು ವರ್ಷ ಕಷ್ಟಪಟ್ಟು ಕಾಯ್ದುಕೊಂಡಿದ್ದ ಬೆಳೆ ಈ ಬಾರಿ ಭಾರೀ ಶೀತ ವಾತಾವರಣದಿಂದ ಹಾನಿಗೊಳಗಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇನ್ನು ರೈತರು ಇಷ್ಟೆಲ್ಲಾ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದರೂ ಸಹ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರತ್ತ ಸುಳಿದಿಲ್ಲ. ಪರಿಹಾರ ಮಾರ್ಗೋಪಾಯ ಸೂಚಿಸುವ ಕೆಲಸವನ್ನು ಮಾಡಿಲ್ಲ. ಅಂತೆಯೇ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯವೂ ನಡೆದಿಲ್ಲ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ನೆರವು ನೀಡಬೇಕೆಂಬುದು ಇವರ ಆಗ್ರಹವಾಗಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ವೀಳ್ಯದೆಲೆ ಬೆಳೆಗಾರರು ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ವೀಳ್ಯದೆಲೆ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ವೀಳ್ಯದೆಲೆ ಬೆಳೆಗಾರರಿಗೆ ನೆರವಿನ ಹಸ್ತ ಚಾಚಬೇಕಿದೆ.

ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ

Published On - 2:47 pm, Tue, 31 January 23