
ಚಿತ್ರದುರ್ಗ, ಜೂನ್ 22: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಕ್ಕಳು 85 ವರ್ಷದ ತಂದೆಯನ್ನು ಮನೆಯಿಂದ ಹೊರ ಹಾಕಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮಾಳಪ್ಪನಹಟ್ಟಿ ಗ್ರಾಮದ ಬಸಪ್ಪ (85) ಅವರ ಹೆಸರಿನಲ್ಲಿ ನಾಲ್ಕು ಎಕರೆ ಭೂಮಿ ಇದೆ. ಬಸಪ್ಪ ಅವರಿಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಗಳು ಇದ್ದು, ಸ್ಥಿತಿವಂತರಾಗಿದ್ದಾರೆ. ಆದರೆ, ಆಸ್ತಿ ವಿವಾದ ಹಾಗೂ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಕ್ಕಳು ತಂದೆಯನ್ನು ಮನೆಯಿಂದ ಹೊರ ಹಾಕಿದ್ದಾರೆ.
ಹೀಗಾಗಿ, ಬಸಪ್ಪ ಅವರು ಸುಮಾರು ವರ್ಷಗಳಿಂದ ವೃದ್ಧಾಶ್ರಮದಲ್ಲಿದ್ದಾರೆ. ಮಕ್ಕಳು ಮನೆಯಿಂದ ಹೊರ ಹಾಕಿದ ಹಿನ್ನೆಲೆಯಲ್ಲಿ ಬಸಪ್ಪ ಅವರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ವಾಪಸ್ ಕರೆದುಕೊಳ್ಳುವಂತೆ ವೃದ್ಧ ಬಸಪ್ಪ ಅವರು ಮಕ್ಕಳ ಮನೆ ಬಳಿಗೆ ಹೋದರೇ, ಸುಪುತ್ರರು ಲೈಟ್ ಆಫ್ ಮಾಡಿಬಿಡುತ್ತಾರೆ. ಈ ಬಗ್ಗೆ ಮಾಹಿತ ತಿಳಿದ ಉಪ ವಿಭಾಗಧಿಕಾರಿ ಮಹೆಬೂಬ್ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಾದ ಜಯಣ್ಣ, ಹನುಮಂತಪ್ಪಗೆ ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದಾರೆ.
ಅಧಿಕಾರಿಗಳು ಬುದ್ಧಿವಾದ ಹೇಳಿದ ಬಳಿಕ ಮಕ್ಕಳು ತಂದೆಯನ್ನು ನೋಡಿಕೊಳ್ಳಲು ಒಪ್ಪಿದ್ದಾರೆ. ಸದ್ಯ, ಬಸಪ್ಪ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದಾರೆ. ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ನೀಡುವಂತೆ ಮಕ್ಕಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಬಸ್ಸಪ್ಪ ಅವರ ಪುತ್ರ ಹನಮಂತಪ್ಪ, “ನಮ್ಮ ತಂದೆ, ನಮ್ಮ ತಾಯಿಯನ್ನು ಕೊನೆಗಾಲದಲ್ಲಿ ಉಪವಾಸ ಇರಿಸಿ ಸಾಯಿಸಿದ್ದಾರೆ. ನಮಗೂ ಶಿಕ್ಷಣ ಕೊಡಿಸಲಿಲ್ಲ. ಮದುವೆ ಮಾಡಲಿಲ್ಲ. ಹೀಗಾಗಿ, ಮನೆಯಿಂದ ಹೊರಹಾಕಿದ್ದೇವೆ” ಎಂದು ಸಬೂಬು ಹೇಳಿದರು.
ಇದನ್ನೂ ಓದಿ: ಮಗಳ ಅಡ್ಮಿಷನ್ಗಾಗಿ ಊರಿಗೆ ತೆರಳುತ್ತಿದ್ದ ತಂದೆಯನ್ನ ಮಾರ್ಗ ಮಧ್ಯೆ ಕೊಂದ ಅಪರಿಚಿತರು
ಒಟ್ಟಾರೆಯಾಗಿ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ವಯೋವೃದ್ಧ ತಂದೆಯನ್ನು ಮಕ್ಕಳು ಮನೆಯಿಂದ ಹೊರಹಾಕಿದ ಅಮಾನವೀಯ ಘಟನೆ ನಡೆದಿದೆ. ಉಪ ವಿಭಾಗಧಿಕಾರಿ ಮಹೆಬೂಬ್ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡ ಮುತುವರ್ಜಿ ವಹಿಸಿ ಬಸಪ್ಪ ಅವರನ್ನು ರಕ್ಷಿಸಿ, ಮರಳಿ ಮಕ್ಕಳ ಮನೆಗೆ ಕಳುಹಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ