ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದ ಚಿತ್ರದುರ್ಗದ ಆಟೋ ಚಾಲಕನ ಮಗಳೀಗ ನ್ಯಾಯಾಧೀಶೆ !

| Updated By: ವಿವೇಕ ಬಿರಾದಾರ

Updated on: Feb 28, 2024 | 2:43 PM

ಸಾಧಿಸುವ ಛಲ ಇದ್ದರೆ ಎಂತಹ ಕಷ್ಟಗಳು ಬಂದರೂ ಎದುರಿಸಿ ಸಾಧಿಸುತ್ತಾರೆ ಎಂಬುವುದಕ್ಕೆ ಉತ್ತಮ ಉದಾಹರಣೆ ಚಿತ್ರದುರ್ಗದ ಯುವತಿ ಟಿ.ಸುಮಾ. ಅನಾರೋಗ್ಯಕ್ಕೆ ತುತ್ತಾಗಿ, ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ನಿರಂತರ ಪ್ರಯತ್ನದಿಂದ ಇಂದು ನ್ಯಾಯಾಧೀಶೆಯಾಗಿದ್ದಾರೆ. ಈ ಮೂಲಕ ತಾನು ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದ ಚಿತ್ರದುರ್ಗದ ಆಟೋ ಚಾಲಕನ ಮಗಳೀಗ ನ್ಯಾಯಾಧೀಶೆ !
ನ್ಯಾಯಾಧೀಶೆ ಟಿ. ಸುಮಾ
Follow us on

ಚಿತ್ರದುರ್ಗ, ಫೆಬ್ರವರಿ 28: ಅಪ್ಪ ಆಟೋ ಚಾಲಕ (Auto Driver) ವೃತ್ತಿಯಲ್ಲಿ ಬದುಕು ಕಟ್ಟಿಕೊಂಡ ಶ್ರಮಜೀವಿ. ಮಕ್ಕಳಿಬ್ಬರೂ ಅಪ್ಪನ ವೃತ್ತಿಯನ್ನೇ ಮುಂದುವರೆಸಿದ್ದರು. ಆದರೆ, ಮಗಳು ಮಾತ್ರ ಛಲಬಿಡದೆ ಓದಿನಲ್ಲಿ ತೊಡಗಿದ್ದಳು. ಮೂರನೇ ಬಾರಿಗೆ ಬರೆದ ಪರೀಕ್ಷೆಯಲ್ಲಿ ಕೊನೆಗೂ ಯಶಸ್ಸು ಸಾಧಿಸಿ ನ್ಯಾಯಾಧೀಶೆಯಾದ (Judge) ಸಾಹಸಗಾಥೆಯಿದು.

2023ರ ನವೆಂಬರ್ ತಿಂಗಳಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ 2024ರ ಜನವರಿ ತಿಂಗಳಲ್ಲಿ ಮೌಖಿಕ ಪರೀಕ್ಷೆ ನಡೆದಿತ್ತು. ಬಳಿಕ 33 ಅಬ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿದ್ದು ಚಿತ್ರದುರ್ಗದ ಯುವತಿ ಟಿ. ಸುಮಾ ನ್ಯಾಯಾಧೀಶರಾಗಿ ಆಯ್ಕೆ ಆಗುವ ಮೂಲಕ ಕೋಟೆನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಟಿ.ಸುಮಾ ವಿದ್ಯಭ್ಯಾಸ

ಚಿತ್ರದುರ್ಗದ ಮಠದ ಕುರುಬರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ದು ಎಸ್​ಜೆಎಂ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡಿದ್ದಾರೆ. 2020-21ರಲ್ಲಿ ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದರು. ಕಾನೂನು ಪದವಿ ಓದುವಾಗಲೇ ನ್ಯಾಯಧೀಶರಾಗಬೇಕೆಂಬ ಕನಸು ಕಟ್ಟಿಕೊಂಡು ನಿರಂತರ ಓದಿನಲ್ಲಿ ನಿರತರಾಗಿದ್ದರು.

ಎರಡನೇ ಸಲ ವಿಫಲ ಮೂರನೇ ಸಲ‌ ಸಫಲ

2021ರಲ್ಲಿ ನ್ಯಾಯಾಧೀಶರ ನೇಮಕಕ್ಕೆ ಪರೀಕ್ಷೆ ಬರೆದಾಗ ಸಂದರ್ಶನದಲ್ಲಿ ವಿಫಲರಾಗಿದ್ದರು. 2022ರಲ್ಲಿ ಅನಾರೋಗ್ಯದ ಕಾರಣ ಮುಖ್ಯ ಪರೀಕ್ಷೆಗೆ ಹಾಜರಾಗಲಿಲ್ಲ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಚೇತರಿಸಿಕೊಂಡ ಬಳಿಕ ಮತ್ತೆ ನ್ಯಾಯಾಧೀಶರಾಗುವ ಕನಸಿನ ಬೆನ್ನು ಬಿದ್ದಿದ್ದರು. ಮೂರನೇ ಪ್ರಯತ್ನದಲ್ಲಿ ಛಲ ಬಿಡದ ವಿಕ್ರಮನಂತೆ ಸಫಲತೆ ಸಾಧಿಸಿದ್ದಾರೆ.

ಕೌಟುಂಬಿಕ ಹಿನ್ನೆಲೆ

ಟಿ.ಸುಮಾ ಚಿತ್ರದುರ್ಗ ನಗರದ ಕೋಡೆನಹಟ್ಟಿಯ ಆಟೋ ಚಾಲಕ ತಿಪ್ಪೇಸ್ವಾಮಿ, ಭಾಗ್ಯಮ್ಮ ದಂಪತಿಗಳ ಮೂರನೇ ಪುತ್ರಿ. ಇಬ್ಬರು ಸಹೋದರರು ಸಹ ಅಪ್ಪನಂತೆ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದಾರೆ. ಕುಟುಂಬದಲ್ಲಿ ಪದವಿ ಪೂರೈಸಿದ ಏಕೈಕ ಯುವತಿ ಸುಮಾ. ಸುಮಾಳ ಸಾಧನೆ ಕುಟುಂಬದಲ್ಲಿ ಭಾರಿ ಖುಷಿ ಮೂಡಿಸಿದೆ.

ಇದನ್ನೂ ಓದಿ: ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಭರವಸೆಯ ಸಾಧನೆ ಮಾಡಿದ ಉದಯೋನ್ಮುಖ ಪ್ರತಿಭೆ ಕಾರ್ತಿಕ್ ವೈ ಬಿ

ನ್ಯಾಯವಾದಿ ಎಂ.ಸಿ.ಪಾಪಣ್ಣ ಅವರ ಮಾರ್ಗದರ್ಶನದಲ್ಲಿ ಸುಮಾ ವಕೀಲ‌ ವೃತ್ತಿಯಲ್ಲಿ ತೊಡಗಿದ್ದರು. ಅಂತೆಯೇ ಸುಮಾ ಅವರ ಕನಸು ಸಾಕಾರಗೊಳ್ಳಲು ಪಾಪಾಣ್ಣ ಸಹಕಾರ ಮಾಡಿದ್ದಾರೆ. ಕಠಿಣ ಪರಿಶ್ರಮದ ಮೂಲಕ ನೇಮಕವಾಗುವ ಮೂಲಕ ಕನಸು ನನಸಾಗಿಸಿಕೊಂಡಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಕಷ್ಟ ಕಾಲದಲ್ಲಿ ನ್ಯಾಯವಾದಿ ಪಾಪಣ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಬರೆಯುವ ಬಗ್ಗೆಯೂ ಚಿಂತನೆ ನಡೆಸಿದ್ದೆ.‌ ಕಾನೂನು ಪದವಿ ಓದಿ ನ್ಯಾಯಾಧೀಶರನ್ನು ಕಂಡ ಬಳಿಕ ನ್ಯಾಯಾಧೀಶೆ ಆಗಬೇಕೆಂಬ ಕನಸ ಮೂಡಿತು. ಗುರಿಯತ್ತಲೇ ಚಿತ್ತ ನೆಟ್ಟು ಸಾಗಿದಾಗ ನ್ಯಾಯಾಧೀಶೆಯಾಗುವ ಕನಸು ಸಾಕಾರಗೊಂಡಿತು ಎಂದು ನ್ಯಾಯಾಧೀಶೆ ಸುಮಾ ಹೇಳಿದರು.

ಇನ್ನು ಮಗಳ ಸಾಧನೆ ಬಗ್ಗೆ ತಂದೆ ತಿಪ್ಪೇಸ್ವಾಮಿ ಮಾತನಾಡಿ, ಸುಮಾಳ ತಾಯಿ ಭಾಗ್ಯಮ್ಮ ಅವರ ಖುಷಿಗೆ ಪಾರವಿಲ್ಲ. ಆಟೋ ವೃತ್ತಿಯಲ್ಲಿ ದುಡಿದು ಕೈಲಾದಷ್ಟು ಓದಿಸಿದ್ದೇವೆ. ಮಗಳು ನ್ಯಾಯಾಧೀಶೆಯಾಗಿದ್ದು ಅಪಾರ ಖುಷಿ ತಂದಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:42 pm, Wed, 28 February 24