ಚಿತ್ರದುರ್ಗ ಬಿಜೆಪಿ ಟಿಕೆಟ್ ಮಿಸ್: ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಬಂಡಾಯವೆದ್ದ ತಂದೆ-ಮಗ
ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಪ್ರಬಲ ಆಕಾಂಕ್ಷಿಗಳು ಬಂಡಾಯ ಏಳುತ್ತಿದ್ದು, ಬಿಜೆಪಿ ಪಾಲಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧವೇ ಸಿಡಿದೇಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ. ಇದೀಗ ಚಿತ್ರದುರ್ಗದಲ್ಲಿ ಶಾಸಕ ಎಂ.ಚಂದ್ರಪ್ಪ ಮತ್ತು ಅವರ ಮಗ ರಘುಚಂದನ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧವೇ ಬಂಡಾಯವೆದ್ದಿದ್ದಾರೆ.
ಚಿತ್ರದುರ್ಗ, ಮಾ.29: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಟಿಕೆಟ್ ಕೈತಪ್ಪಿದ ಪ್ರಬಲ ಆಕಾಂಕ್ಷಿಗಳು ಬಂಡಾಯ ಏಳುತ್ತಿರುವುದು ಬಿಜೆಪಿ ಪಾಲಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಬಿ.ಎಸ್. ಯಡಿಯೂರಪ್ಪ (B.S. Yediyurappa) ಮತ್ತು ಇವರ ಪುತ್ರ ಬಿ.ವೈ. ವಿಜಯೇಂದ್ರ (B.Y.Vijayendra) ವಿರುದ್ಧವೇ ನಾಯಕರು ಸಿಡಿದೇಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಿಎಸ್ವೈ ವಿರುದ್ಧ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ. ಇದೀಗ ಚಿತ್ರದುರ್ಗದಲ್ಲಿ (Chitradurga) ಶಾಸಕ ಎಂ.ಚಂದ್ರಪ್ಪ (M Chandrappa) ಮತ್ತು ಅವರ ಮಗ ರಘುಚಂದನ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ.
ಪುತ್ರನಿಗೆ ಚಿತ್ರದುರ್ಗ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಶಾಸಕ ಚಂದ್ರಪ್ಪ ಸಿಡಿದೆದ್ದಿದ್ದಾರೆ. ಯಡಿಯೂರಪ್ಪ ಮತ್ತು ಇವರ ಪುತ್ರನ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಚಂದ್ರಪ್ಪ ಅವರು ಚಿತ್ರದುರ್ಗದ ಎಸ್ಜಿ ಕನ್ವಿಷನ್ ಹಾಲ್ನಲ್ಲಿ ಇಂದು ರೆಬಲ್ ಸಭೆಗೆ ಸಿದ್ಧತೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಶಾಸಕ ಎಂ.ಚಂದ್ರಪ್ಪ, ರಘು ಚಂದನ್ ಭಾವಚಿತ್ರ ಇರುವ ಬ್ಯಾನರ್ಗಳನ್ನು ಹಾಕಲಾಗಿದೆ. ಅಲ್ಲದೆ, ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗುವಂತೆ ಕರೆ ನೀಡಲಾಗಿದೆ. ಆ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಲು ಶಾಸಕ ಎಂ.ಚಂದ್ರಪ್ಪ ಸಿದ್ಧರಾಗಿದ್ದಾರೆ.
ಯಡಿಯೂರಪ್ಪ ವಿರುದ್ಧ ಸಿಡಿದೇಳುತ್ತಿರುವ ಬಿಜೆಪಿ ನಾಯಕರು
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಿಡಿದೆದ್ದಿದ್ದರು. ಇದೀಗ ಲೋಕಸಭಾ ಚುನಾವಣೆ ವೇಳೆಯಲ್ಲಿ ಯಡಿಯೂರಪ್ಪ ವಿರುದ್ಧ ರಾಜ್ಯದ ನಾಯಕರು ಸಿಡಿದೇಳುತ್ತಿದ್ದಾರೆ.
ತನ್ನ ಪುತ್ರ ಕೆಈ ಕಾಂತೇಶ್ಗೆ ಹಾವೇರಿ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಜೆಪಿಯ ಕಟ್ಟಾಳು ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬಿಎಸ್ವೈ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದಾರೆ. ಹೌದು, ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ಮುಕ್ತಿಗೊಳಿಸುವುದಾಗಿ ಶಪಥ ಮಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣದ ಆರೋಪವನ್ನೂ ಮಾಡುತ್ತಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ
ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಯಡಿಯೂರಪ್ಪ ವಿರುದ್ಧ ಗುಡುಗಿದ್ದರು. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದ ನನ್ನನ್ನು ಮತ್ತೆ ಟಿಕೆಟ್ ಕೊಡಿಸುತ್ತೇವೆ ಎಂದು ಭರವಸೆ ನೀಡಿ ಕೈಕೊಟ್ಟರು ಎಂದು ಸದಾನಂದಗೌಡ ಅವರು ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಸುದ್ದಿಗೋಷ್ಠಿ ನಡೆಸಿ ಬಿಜೆಪಿಯ ಪರಿವಾರ (ಯಡಿಯೂರಪ್ಪ ಮತ್ತು ಪುತ್ರರ ಅಧಿಕಾರ) ರಾಜಕಾರಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಕೇಂದ್ರದ ನಾಯಕರು, ಆರ್ಎಸ್ಎಸ್ ನಾಯಕರ ಮಧ್ಯಪ್ರವೇಶದಿಂದ ಸದಾನಂದಗೌಡರು ಸೈಲೆಂಟ್ ಆಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಮಾಜಿ ಸಚಿವ ಸಿಟಿ ರವಿ ಕಣ್ಣಿಟ್ಟಿದ್ದರು. ಆದರೆ, ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಬೆಂಬಲಿಗರ ನಡುವೆ ವಾಕ್ಸಮ ನಡೆಯಿತು. ಹೀಗಾಗಿ ಇಬ್ಬರಿಗೂ ಟಿಕೆಟ್ ನೀಡದ ಹೈಕಮಾಂಡ್, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಿದೆ. ಆದರೆ, ಶೋಭಾ ಕರಂದ್ಲಾಜೆ ಅವರಿಗೆ ಯಡಿಯೂರಪ್ಪ ಅವರು ಡಿವಿ ಸದಾನಂದಗೌಡ ಅವರು ಹಾಲಿ ಸಂಸದರಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಸಿಟಿ ರವಿ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ