ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಸಮಸ್ಯೆ; ಕಂಗಾಲದ ಪೋಷಕರು
ಅದು ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾಸ್ಪತ್ರೆ ಎಂಬಂತಾಗಿದೆ. ಅಸಲಿಗೆ ಅಲ್ಲಿ ಪುಟ್ಟ ಮಕ್ಕಳಿಗೆ ಸಕಾಲಕ್ಕೆ ತುರ್ತು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಯೂ ಇಲ್ಲವಾಗಿದೆ. ಆದರೂ ಅಲ್ಲಿನ ಅಧಿಕಾರಿಗಳು ಮಾತ್ರ ತ್ವರಿತಗತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಂಡಿಲ್ಲ.
ಚಿತ್ರದುರ್ಗ: ಪುಟ್ಟದಾದ ಒಂದೇ ಬೆಡ್ನಲ್ಲಿ ಮೂರು ಪುಟ್ಟ ಕಂದಮ್ಮಗಳು. ಕಂದಮ್ಮಗಳಿಗೆ ಸಕಾಲಕ್ಕೆಸೂಕ್ತ ಚಿಕಿತ್ಸೆ ಸಿಗದೆ ಪೋಷಕರು ಕಂಗಾಲು. ಎನ್.ಐ.ಸಿ.ಯು ನಿರ್ಮಾಣಕ್ಕೆ ನಡೆಯುತ್ತಿರುವ ಕಾಮಗಾರಿ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ. ಹೌದು ಕಳೆದ 10ದಿನಗಳ ಹಿಂದೆಯೇ ಆಸ್ಪತ್ರೆಯಲ್ಲಿನ ಮಕ್ಕಳ ತುರ್ತು ಚಿಕಿತ್ಸಾ ಘಟಕದಲ್ಲಿ ತಾಂತ್ರಿಕ ದೋಷದಿಂದ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಮಕ್ಕಳಿಗೆ ಸಮಸ್ಯೆ ಆಗಿಲ್ಲ. ತಾತ್ಕಾಲಿಕ ಎನ್.ಐ.ಸಿ.ಯು ನಿರ್ಮಿಸಿ ಕೆಲ ಮಕ್ಕಳನ್ನು ಶಿಫ್ಟ್ ಮಾಡಲಾಗಿದೆ. ಇದರಿಂದ ಬೆಡ್ಗಳ ಸಮಸ್ಯೆ ಉಂಟಾಗಿದ್ದು ಒಂದೇ ಬೆಡ್ನಲ್ಲಿ ಮೂರು ಮಕ್ಕಳನ್ನು ಹಾಕಿ ಚಿಕಿತ್ಸೆ ನೀಡುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನುಳಿದಂತೆ ಹೆಚ್ಚುವರಿ ಮಕ್ಕಳನ್ನು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಇನ್ನು ಈಗಾಗಲೇ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಆಕ್ಸಿಜನ್ ಸಮಸ್ಯೆ ಉದ್ಭವಿಸಿ ಹತ್ತು ದಿನಗಳೇ ಕಳೆದಿವೆ. ತಾತ್ಕಾಲಿಕ ಎನ್.ಐ.ಸಿ.ಯು ನಿರ್ಮಾಣ ಮಾಡಲಾಗಿದೆಯಾದರೂ ಖಾಯಂ ವಾರ್ಡ್ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗಿಲ್ಲ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಬಸವರಾಜ್ ಅವರನ್ನ ಕೇಳಿದ್ರೆ ಈಗಾಗಲೇ ನಾವು ತಾತ್ಕಾಲಿಕ ವಾರ್ಡ್ ನಿರ್ಮಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಬೆಡ್ ಸಮಸ್ಯೆ ಆಗಿದ್ದು ಕೆಲ ಮಕ್ಕಳನ್ನು ನಿಯಮಾನುಸಾರ ಬೇರೆ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದೇವೆ. ಇನ್ನೊಂದು ವಾರದೊಳಗೆ ಸುಸಜ್ಜಿತ ಎನ್.ಐ.ಸಿ.ಯು ವಾರ್ಡ್ ನಿರ್ಮಾಣ ಆಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದ ಬೀದಿ ನಾಯಿ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆ ಸದಾ ಒಂದಲ್ಲಾ ಒಂದು ಸಮಸ್ಯೆ ಮೂಲಕ ಸುದ್ದಿಯಲ್ಲಿರುತ್ತದೆ. ಸದ್ಯ ಮಕ್ಕಳ ತೀವ್ರ ನಿಗಾ ಘಟಕದಲ್ಲೂ ಸಮಸ್ಯೆ ತಲೆ ದೋರಿದ್ದು ಪೋಷಕರಲ್ಲಿ ಆತಂಕ ಮೂಡಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ