ಚಿತ್ರದುರ್ಗ ಜಿಲ್ಲೆಯಲ್ಲಿ ವಾಮಾಚಾರದ ಭೀತಿ; ಜನರು ಓಡಾಡುವ ರಸ್ತೆಗಳಲ್ಲೇ ಲಿಂಬೆಹಣ್ಣು, ಕುಡಿಕೆ, ಕುಂಕುಮ

ಮೊಳಕಾಲ್ಮೂರು ಮಾತ್ರ ಅಲ್ಲದೆ ಚಿತ್ರದುರ್ಗ, ಚಳ್ಳಕೆರೆ ಭಾಗದಲ್ಲಿ ಇಂಥ ಘಟನೆಗಳು ಕಂಡು ಬರುತ್ತಿವೆ. ನಗರದ ಜೋಗಿಮಟ್ಟಿ ರಸ್ತೆ, ಹೊಳಲ್ಕೆರೆ ರಸ್ತೆಯ ಹೊರ ವಲಯದಲ್ಲಿ ಅನೇಕ ಕಡೆ ನಿಂಬೆಹಣ್ಣು ಮತ್ತಿತರೆ ವಸ್ತುಗಳು ಪತ್ತೆ ಆಗುತ್ತಿದ್ದು, ನಿತ್ಯ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವಾಮಾಚಾರದ ಭೀತಿ; ಜನರು ಓಡಾಡುವ ರಸ್ತೆಗಳಲ್ಲೇ ಲಿಂಬೆಹಣ್ಣು, ಕುಡಿಕೆ, ಕುಂಕುಮ
ಚಿತ್ರದುರ್ಗ ಜಿಲ್ಲೆಯಲ್ಲಿ ವಾಮಾಚಾರದ ಭೀತಿ
Updated By: preethi shettigar

Updated on: Aug 03, 2021 | 8:48 AM

ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ತವರಾದ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳು ಜಾರಿಯಲ್ಲಿವೆ. ಈ ಮಧ್ಯೆ ಕೆಲ ಕಿಡಿಗೇಡಿಗಳು ಜನರು ಓಡಾಡುವ ರಸ್ತೆಗಳಲ್ಲೇ ರಾತೋರಾತ್ರಿ ವಾಮಾಚಾರ, ಭಾನಾಮತಿ ಮಾಡುವ ಮೂಲಕ ಜನರಲ್ಲಿ ಭಯಭೀತಿ ಸೃಷ್ಟಿಸುತ್ತಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಪಿಚಾರಹಟ್ಟಿ ಗ್ರಾಮದ ಬಳಿ ನಾಲ್ಕು ರಸ್ತೆ ಸೇರುವ ಸ್ಥಳದಲ್ಲಿ ಅಮಾವಾಸ್ಯೆ ಬಂದರೆ ಸಾಕು ವಾಮಾಚಾರ ಮಾಡಲಾಗುತ್ತಿದೆ. ಲಿಂಬೆಹಣ್ಣು, ಕುಡಿಕೆ, ಕುಂಕುಮ, ಎಲೆ ಅಡಿಕೆ, ಕಪ್ಪು, ಕೆಂಪು ವಸ್ತ್ರ, ಗೊಂಬೆಗಳು ಪತ್ತೆ ಆಗುತ್ತಿವೆ. ಜನರು ನಿತ್ಯ ಸಂಚರಿಸುವ ರಸ್ತೆಗಳ ಮಧ್ಯೆಯೇ ಇಷ್ಟೆಲ್ಲಾ ಪತ್ತೆ ಆಗುತ್ತಿದ್ದು‌, ಇದು ಸಹಜವಾಗಿ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ.

ಪೀಚಾರಹಟ್ಟಿ, ಕೋನಸಾಗರ ಗ್ರಾಮಸ್ಥರು ಈ ಬಗ್ಗೆ ಈಗಾಗಲೇ ಮೊಳಕಾಲ್ಮೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಾಮಾಚಾರ, ಭಾನಾಮತಿ ಮೂಲಕ ಜನರಲ್ಲಿ ಭೀತಿ‌ ಸೃಷ್ಟಿಸುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೊಳಕಾಲ್ಮೂರು ಮಾತ್ರ ಅಲ್ಲದೆ ಚಿತ್ರದುರ್ಗ, ಚಳ್ಳಕೆರೆ ಭಾಗದಲ್ಲಿ ಇಂಥ ಘಟನೆಗಳು ಕಂಡು ಬರುತ್ತಿವೆ. ನಗರದ ಜೋಗಿಮಟ್ಟಿ ರಸ್ತೆ, ಹೊಳಲ್ಕೆರೆ ರಸ್ತೆಯ ಹೊರ ವಲಯದಲ್ಲಿ ಅನೇಕ ಕಡೆ ನಿಂಬೆಹಣ್ಣು ಮತ್ತಿತರೆ ವಸ್ತುಗಳು ಪತ್ತೆ ಆಗುತ್ತಿದ್ದು, ನಿತ್ಯ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಮೌಢ್ಯ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೆಲವರೂ ಭಾನಾಮತಿ ಮತ್ತು ವಾಮಾಚಾರದ ಮೂಲಕ ಜನರ ನೆಮ್ಮದಿ ಕೆಡಿಸುವ ಕೆಲಸ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಗಮನಹರಿಸಿ ಭೀತಿ ಸೃಷ್ಟಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಮೊಳಕಾಲ್ಮೂರು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ವಾಮಾಚಾರ, ಭಾನಾಮತಿ ಮಾಡುವ ಕೆಲಸ ಕೆಲವರಿಂದ ನಡೆಯುತ್ತಿದೆ. ಮುಗ್ಧ ಜನರಲ್ಲಿ ಭೀತಿ ಸೃಷ್ಟಿಸಿ ಸಮಾಜದಲ್ಲಿ ನೆಮ್ಮದಿ‌ ಕೆಡಿಸಲಾಗುತ್ತಿದೆ. ಅಧಿಕಾರಿಗಳು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಪ್ರತಾಪ್ ಜೋಗಿ ಆಗ್ರಹಿಸಿದ್ದಾರೆ.

ಕೋನಸಾಗರ ಗ್ರಾಮಸ್ಥರು ಗ್ರಾಮದ ಬಳಿ ರಸ್ತೆ ಮೇಲೆ ವಾಮಾಚಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಜನರಲ್ಲಿ ಭೀತಿ ಸೃಷ್ಟಿಯಾಗುತ್ತಿದೆ ಎಂದು ಮೊಳಕಾಲ್ಮೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.

ಇದನ್ನೂ ಓದಿ:

ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್

ನಿಧಿ ಆಸೆಗಾಗಿ ದಾವಣಗೆರೆ ಹನುಮ ದೇವಾಲಯಕ್ಕೆ ವಾಮಾಚಾರ; ಗ್ರಾಮಸ್ಥರ ಆರೋಪ