ಬಿಜೆಪಿ ಸರ್ಕಾರ ದೇಶದಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ: ರಾಹುಲ್​ ಗಾಂಧಿ

| Updated By: ವಿವೇಕ ಬಿರಾದಾರ

Updated on: Oct 11, 2022 | 8:15 PM

ಬಿಜೆಪಿ ಸರ್ಕಾರ ದೇಶದಲ್ಲಿ ದ್ವೇಷದ ಭಾವನೆ ಮೂಡಿಸುತ್ತಿದ್ದು, ವಿವಿಧ ರೀತಿಯಲ್ಲಿ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ದೇಶದಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ: ರಾಹುಲ್​ ಗಾಂಧಿ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
Follow us on

ಚಿತ್ರದುರ್ಗ: ಬಿಜೆಪಿ ಸರ್ಕಾರ (BJP Government) ದೇಶದಲ್ಲಿ ದ್ವೇಷದ ಭಾವನೆ ಮೂಡಿಸುತ್ತಿದ್ದು, ವಿವಿಧ ರೀತಿಯಲ್ಲಿ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಭಾರತ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ದಿನದ ಅಂತ್ಯ ಹಾಡಿದೆ. ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಐಕ್ಯತಾ ಯಾತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸ ಸಿಗುತ್ತಿದೆ. ಎಲ್ಲಾ ಜಾತಿ, ಧರ್ಮಗಳ ಜನ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪಾದಯಾತ್ರೆ ವೇಳೆ ನಡೆಯುವಾಗ ಕೆಲವರು ಬಿದ್ದರು, ಜೊತೆಗೆ ಇದ್ದವರು ಎಬ್ಬಿಸುತ್ತಾರೆ. ಇದರಿಂದ ನಮ್ಮನ್ನು ರಕ್ಷಿಸುವವರಿದ್ದಾರೆಂಬ ಭಾವನೆ ಮೂಡುತ್ತೆ. ಹಾಗೇ ದೇಶದ ರೈತ ಬಿದ್ದರೆ ಇಡೀ ದೇಶ ಆತನ ನೆರವಿಗೆ ಬರಬೇಕು. ಯಾತ್ರೆಯಲ್ಲಿ ನಡೆಯುವವರ 40 ಪ್ರತಿಶತ ಹಣವನ್ನು ಯಾರಾದರೂ ಕಸಿದುಕೊಂಡರೆ ಹೇಗೆ ಅನ್ನಿಸುತ್ತದೆ ? ಒಂದೇ ಸಮುದಾಯ ಮತ್ತೊಂದು ಸಮುದಾಯದ ಮೇಲೆ ದೌರ್ಜನ್ಯ ನಡೆಸಿದರೇ ಹೇಗೆ ಅನ್ನಿಸುತ್ತದೆ ? ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಇಲ್ಲಿ ಯಾರೂ ಕನ್ನಡ ಮಾತಾಡಬಾರದು ಎಂದರೆ ಹೇಗೆ ಅನ್ನಿಸುತ್ತದೆ ? ಕೇಂದ್ರ ಸರ್ಕಾರ ಬಡವರು, ರೈತರು, ಕಾರ್ಮಿಕರಿಗೆ ನೆರವಾಗದೆ, ದೇಶದ ದೊಡ್ಡ ಉದ್ಯಮಿಗಳಿಗೆ ನೆರವು ನೀಡುತ್ತಿದೆ. ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಹುದ್ದೆಗೆ 2,500 ಕೋಟಿ ನೀಡಬೇಕು. ಈ ಮಾತನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ? ಸಚಿವ‌ ಸ್ಥಾನಕ್ಕೆ ಕೆ‌.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದೇಕೆ ? ಪಿಎಸ್​ಐ, ಇಂಜಿನಿಯರ್​ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಕರ್ನಾಟಕದಲ್ಲಿ ಇಷ್ಟೆಲ್ಲ ಹಗರಣ ನಡೆದರೂ ಪ್ರಧಾನಿ ನರೇಂದ್ರ ಮೋದಿ ಮಾತಾಡುತ್ತಿಲ್ಲ ಎಂದು ಕಾಲೆಳೆದರು.

ಪಿಎಸ್​ಐ ಹುದ್ದೆ, ಇಂಜಿನಿಯರಿಂಗ್ ಹುದ್ದೆ ನೇಮಕಾತಿಯಲ್ಲಿ ಹಗರಣ ನಡೆದಿದೆ. ಎರಡೂವರೆ‌ ಲಕ್ಷ ಪೋಸ್ಟ್​​ಗಳು ಇನ್ನೂ ಖಾಲಿ ಉಳಿದಿವೆ. ಲಕ್ಷಾಂತರ ಮಂದಿಯಿಂದ ಕರ್ನಾಟಕ ಸರ್ಕಾರ ಲೂಟಿ ಮಾಡಿದೆ. ಲಕ್ಷಾಂತರ ಮಂದಿಗೆ ಇದರಿಂದ ಅನ್ಯಾಯ ಆಗಿದೆ. ಕರ್ನಾಟಕದೊಂದಿಗೆ ನಡೆಯುತ್ತ ನಾನು ಪಾಠ ಕಲಿಯುತ್ತಿದ್ದೇನೆ. ಕರ್ನಾಟಕದ ಜನರ ಪ್ರೀತಿ ಸಹಕಾರ ಅಭಿಮಾನಕ್ಕೆ ನನ್ನ ಧನ್ಯವಾದಗಳು ಎಂದು ಧನ್ಯವಾದ ಅರ್ಪಿಸಿದರು.

ಬಹಳಷ್ಡು ಬಾರಿ ಹೆಣ್ಣು ಮಕ್ಕಳ ಡ್ರೆಸ್ ನಿಂದಲೇ ರೇಪ್ ಆಗುತ್ತದೆ ಅಂತ ಅವರು ಹೇಳುತ್ತಾರೆ. ಇದು ಇಡೀ ದೇಶದ ಹೆಣ್ಣು ಮಕ್ಕಳಿಗೆ ಮಾಡುವ ಅವಮಾನ. ಇಂಥದ್ದನ್ನು ವಿರೋಧಿಸಿ ನಾವು ಯಾತ್ರೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಒಬ್ಬನೇ ಒಬ್ಬ ರೈತನು ಕೂಡ ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಸರ್ಕಾರದ ಸಹಾಯವಿಲ್ಲದೇ ಕೃಷಿಯಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲ. ಮೊದಲ ಬಾರಿಗೆ ರೈತನಿಂದಲೂ ಜಿಎಸ್ಟಿ ಪಡೆಯಲಾಗುತ್ತಿದೆ. ಗೊಬ್ಬರದ ಮೇಲೆ, ಉಪಕರಣಗಳ ಮೇಲೆ ಜಿಎಸ್ಟಿ ಕಟ್ಟಲಾಗುತ್ತಿದೆ. ಕರ್ನಾಟಕದ ಭವಿಷ್ಯದ ಕಾಂಗ್ರೆಸ್ ಸರ್ಕಾರ ಕೂಡ ರೈತರ ಪರವಾಗಿ ಕೆಲಸ ಮಾಡಬೇಕು ಮಾಡುತ್ತದೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Tue, 11 October 22