ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿಗೆ ಭಾರತ ಜೋಡೋ ಯಾತ್ರೆ ಆಗಮಿಸಿದ್ದು, ಈ ವೇಳೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ (Bharat Jodo Yatra) ಆಗಮಿಸಿದೆ. ಗ್ರಾಮದಲ್ಲಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ‘ಮ್ಯಾಸ ನಾಯಕ’ ಪದ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಿದ್ದನ್ನು ವಿರೋಧಿಸಿ ‘ಮ್ಯಾಸ ನಾಯಕ’ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಕೇಂದ್ರದ ಒಬಿಸಿ ಪಟ್ಟಿಯಿಂದ ‘ಮ್ಯಾಸ ನಾಯಕ’ ಪದ ಕೈಬಿಟ್ಟು, ಎಸ್ಟಿ ಪಟ್ಟಿಗೆ ‘ಮ್ಯಾಸ ನಾಯಕ’ ಪದ ಸೇರಿಸಬೇಕೆಂದು ಸಂಸದ ರಾಹುಲ್ ಗಾಂಧಿ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಮನವಿ ಸಲ್ಲಿಸಿದ್ದಾರೆ. ನಾಯಕ ಪದಕ್ಕೆ ಸಮನಾರ್ಥ ಪದವೆಂದು ಪರಿಗಣಿಸಬೇಕು. ಪರಿಶಿಷ್ಟ ಪಂಗಡದ ಮ್ಯಾಸ ನಾಯಕ ಸಮುದಾಯ ಎಂದು ಪರಿಗಣಿಸಬೇಕು. ಕೆಲವರು ಪ್ರಭಾವ ಬೀರಿ ಕೇಂದ್ರದ ಓಬಿಸಿ ಒಟ್ಟಿಗೆ ‘ಮ್ಯಾಸ ನಾಯಕ’ ಪದ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬ್ಯಾನರಲ್ಲಿ ಕನ್ನಡ ಭಾಷೆ ಕಡೆಗಣನೆ
ಚಿತ್ರದುರ್ಗ ನಗರದಲ್ಲಿ ಬಾರತ್ ಜೋಡೋ ಯಾತ್ರೆಗೆ ಶುಭಕೋರಿದ ಕಾಂಗ್ರೆಸ್ ಪಕ್ಷದ ಬ್ಯಾನರ್ನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆಂದು ಚಿತ್ರದುರ್ಗದ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಆಂಗ್ಲ ಭಾಷೆಯಲ್ಲೇ ಬ್ಯಾನರ್ಗಳನ್ನು ಪ್ರಕಟಣೆಗೆ ಬಳಸಿರುವುದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರುನಾಡ ವಿಜಯಸೇನೆ ಕಾರ್ಯಕರ್ತರು ಬ್ಯಾನರ್ಗಳ ಮೇಲೆ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ನಗರ ಠಾಣೆ ಪೊಲೀಸರ ಮದ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 12 October 22