ಜೋಡೋ ಯಾತ್ರೆಯಲ್ಲಿ ಮಕ್ಕಳ ದುರುಪಯೋಗ : ಮಕ್ಕಳ ಆಯೋಗಕ್ಕೆ 50 ಪುಟಗಳ ಉತ್ತರ ನೀಡಲಾಗಿದೆ-ಡಿಕೆ ಶಿವಕುಮಾರ್
ಭಾರತ ಜೋಡೋ ಯಾತ್ರೆಯಲ್ಲಿ ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಕ್ಕಳ ಆಯೋಗದ ನೋಟಿಸ್ಗೆ ಪಕ್ಷದಿಂದ 50 ಪುಟಗಳ ಉತ್ತರ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ (Bharat Jodo Yatra) ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಕ್ಕಳ ಆಯೋಗದವರು ನೋಟಿಸ್ ನೀಡಿದ್ದರು. ನೋಟಿಸ್ಗೆ ಪಕ್ಷದಿಂದ 50 ಪುಟಗಳ ಉತ್ತರ ನೀಡಲಾಗಿದೆ ಎಂದು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಸಾಣಿಕೆರೆ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಷ, ಜಾತಿ, ಧರ್ಮ ಇಲ್ಲ. ಮಕ್ಕಳೊಂದಿಗೆ ಬಂದು ಯಾರು ಬೇಕಾದರೂ ಭಾಗಿಯಾಗಹುದು ಎಂದು ಹೇಳಿದರು.
ಗಾಂಧಿ ಕುಟುಂಬದ ಮೊಮ್ಮಗನ ಯಾತ್ರೆಗೆ ಜನರು ಬರುತ್ತಿದ್ದಾರೆ. ರಾಜಕಾರಣಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಅಗತ್ಯ ಕಾಂಗ್ರೆಸ್ಗಿಲ್ಲ. ಮಕ್ಕಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಹಲವು ಯೋಜನೆ ರೂಪಿಸಿದೆ. ರಾಜಕೀಯಕ್ಕಾಗಿ ಮಕ್ಕಳ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಜನರು ತೋರುವ ಪ್ರೀತಿ ಸಹಿಸದೇ ದೂರು ದಾಖಲಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಜನರು ನೋವು, ನಲಿವು ಹಂಚಿಕೊಳ್ಳುತ್ತಿದ್ದಾರೆ. ಕಾಡುಗೊಲ್ಲ ಸಮುದಾಯದವರು ಸಹ ರಾಹುಲ್ ಗಾಂಧಿ ಜೊತೆ ಇದ್ದಾರೆ. ಕೆಲ ನಿವೃತ್ತ ಸೈನಿಕರೂ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಹಿರಿಯೂರು ಬಳಿ ಅಪಘಾತದಲ್ಲಿ ಕೈ ಕಾರ್ಯಕರ್ತ ರಮೇಶ ಸಾವಾಗಿತ್ತು. ಕುಟುಂಬಕ್ಕೆ 10 ಲಕ್ಷ ರೂಪಾಯಿಯನ್ನು ಪಕ್ಷದಿಂದ ನೀಡುತ್ತೇವೆ. ಯಾತ್ರೆ ಬಳಿಕ ನಾನೇ ರಮೇಶ ಮನೆಗೆ ತೆರಳಿ ಪರಿಹಾರ ಹಣ ನೀಡುತ್ತೇವೆ.
ರಾಹುಲ್ ಗಾಂಧಿಯವರು ನರೇಗಾ ಕೂಲಿಕಾರ್ಮಿಕರ ಸಮಸ್ಯೆ ಆಲಿಸಿದರು. ಅಂಗನವಾಡಿ, ಆಶಾ ಕಾರ್ಯಕರ್ತರ ಸಮಸ್ಯೆ ಆಲಿಸಿದರು. ಚಿಂದಿ ಹಾಯುವವರ ಸಮಸ್ಯೆ ಆಲಿಸಿದರು. ಸರ್ಕಾರದಿಂದ ಯಾವ ನೆರವು ಬೇಕೆಂದು ಚರ್ಚಿಸಿದರು. ಕಾಲಲ್ಲಿ ಬರೆದು ಶಿಕ್ಷಕಿಯಾದ ಲಕ್ಷ್ಮೀದೇವಿ ಜತೆಯೂ ಚರ್ಚೆ ಮಾಡಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶ ಒಗ್ಗೂಡಲಿದೆ. ಎಐಸಿಸಿ ಚುನಾವಣೆ ಹಿನ್ನೆಲೆ, ಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ರಾಹುಲ್ ಗಾಂಧಿ ಸೇರಿ ಇತರರಿಂದ ಪ್ರತ್ಯೇಕ ಕೇಂದ್ರದಲ್ಲಿ ಮತದಾನ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Tue, 11 October 22