Muruga Mutt: ಮುರುಘಾಮಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್​ ಶಾಸಕ ಕೆಸಿ ವಿರೇಂದ್ರ

ಮುರುಘಾಮಠದ ಕಾರ್ಯದರ್ಶಿಯಾಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

Muruga Mutt: ಮುರುಘಾಮಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್​ ಶಾಸಕ ಕೆಸಿ ವಿರೇಂದ್ರ
ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ
Follow us
|

Updated on:Jun 13, 2023 | 4:44 PM

ಚಿತ್ರದುರ್ಗ: ಮುರುಘಾ ಮಠ (Muruga Mutt) ದ ಕಾರ್ಯದರ್ಶಿಯಾಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುರುಘಾಮಠದ ಮುರುಘಾಶ್ರೀ ಫೋಕ್ಸೋ ಕೇಸಲ್ಲಿ ಬಂಧನ ಹಿನ್ನೆಲೆ ಹಿಂದಿನ ಸರ್ಕಾರ ಆಡಳಿತಾಧಿಕಾರಿ ನೇಮಿಸಿತ್ತು. ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ಉಸ್ತುವಾರಿ ಬಸವಪ್ರಭು ಶ್ರೀ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಮಠದ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಮುರುಘಾ ಮಠದ ಆಡಳಿತಕ್ಕೆ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗಿತ್ತು. ಸದ್ಯ ಬಸವಪ್ರಭು ಸ್ವಾಮೀಜಿ, ಕೆ.ಸಿ.ವಿರೇಂದ್ರ ನೇತೃತ್ವದಲ್ಲಿ ಆಡಳಿತಕ್ಕೆ ನಿರ್ಧಾರ ಮಾಡಲಾಗಿದೆ.

ಮಠದ ಕಾರ್ಯದರ್ಶಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ: ಶಾಸಕ ಕೆ.ಸಿ.ವಿರೇಂದ್ರ

ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಶಾಸಕ ಕೆ.ಸಿ.ವಿರೇಂದ್ರ, ಈ ಹಿಂದೆ ಸಭೆ ನಡೆಸಿ ತಾತ್ಕಾಲಿಕ ಸಮಿತಿ ರಚಿಸಿದ್ದೆವು. ಇಂದು ಮಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮಠದ ಕಾರ್ಯದರ್ಶಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ. ನಮ್ಮ ತಾತನ ಕಾಲದಿಂದಲೂ ಸಹ ನಾವು ಮಠದ ಭಕ್ತರು. ಮಠದ ಸೇವೆಗೆ ಗುರುಗಳು ಅವಕಾಶ ನೀಡಿದ್ದಾರೆ. ಜವಾಬ್ದಾರಿಯಿಂದ ಮಠದ ಕಾರ್ಯದರ್ಶಿ ಹುದ್ದೆ‌ ನಿಭಾಯಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಚಿತ್ರದುರ್ಗ ಮುರುಘಾಮಠಕ್ಕೆ ಸರ್ಕಾರದ ಆಡಳಿತಾಧಿಕಾರಿ ನೇಮಕ ರದ್ದು ಪಡಿಸಿದ ಹೈಕೋರ್ಟ್

ಗುರುಗಳ ಮಾರ್ಗದರ್ಶನ ಇಲ್ಲದೆ ಹೆಜ್ಜೆ ಇಡುವುದಿಲ್ಲ: ಉಸ್ತುವಾರಿ ಬಸವಪ್ರಭು ಶ್ರೀ

ಮುರುಘಾಮಠದಲ್ಲಿ ಉಸ್ತುವಾರಿ ಬಸವಪ್ರಭು ಶ್ರೀ ಪ್ರತಿಕ್ರಿಯಿಸಿ, ಮಠಕ್ಕೆ ಕಷ್ಟ ಬಂದಾಗ ಅನೇಕರು ಹೆಗಲಿಗೆ ಹೆಗಲು ನೀಡಿದ್ದಾರೆ. ಈಗ ಎಲ್ಲರ ಪ್ರಯತ್ನದಿಂದ ಒಳ್ಳೆಯದಾಗುತ್ತಿದೆ. ಮಠದ ಭಕ್ತರ ಸಹಕಾರ ನಾವು ಎಂದೂ ಮರೆಯೋದಿಲ್ಲ. ಗುರುಗಳು (ಮುರುಘಾಶ್ರೀ) ಬರುವವರೆಗ ತಾತ್ಕಾಲಿಕ ಸಮಿತಿ ಇರಲಿದೆ. ಗುರುಗಳು ಬಂದ ಬಳಿಕ ಅವರ ಆದೇಶದಂತೆ ನಡೆಯುತ್ತೇವೆ. ಯಾವುದೇ ತೀರ್ಮಾನಕ್ಕೆ ಮುನ್ನ ಸಭೆ ಸೇರಿ ಒಮ್ಮತದ ನಿರ್ಧಾರ ಮಾಡಲಾಗುತ್ತದೆ.

ಗುರುಗಳ ಮಾರ್ಗದರ್ಶನ ಪಡೆದುಕೊಂಡು ಸಾಗುತ್ತೇವೆ. ಅವರ ಮಾರ್ಗದರ್ಶನ ಇಲ್ಲದೆ ಹೆಜ್ಜೆ ಇಡುವುದಿಲ್ಲ. ಶ್ರೀಮಠ, ಶಾಖಾ ಮಠಗಳು, ಸಂಸ್ಥೆಗಳ ಅಭಿವೃದ್ಧಿಗೆ ಒಟ್ಟಾಗಿ ಶ್ರಮ ವಹಿಸುತ್ತೇವೆ. ಮುರುಘಾಶ್ರೀ ವಿರುದ್ಧದ ಷಡ್ಯಂತ್ರದ ಬಗ್ಗೆ ಜನರಿಗೆ ತಿಳಿಸಬೇಕು. ಹೈಕೋರ್ಟ್ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದೆ. ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದೆ. ಆಡಳಿತಾಧಿಕಾರಿ ವಸ್ತ್ರದ್ ಕೂಡಲೇ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಸರ್ಕಾರ ಹಿಂಪಡೆಯಬೇಕು: ಬಸವಪ್ರಭು ಸ್ವಾಮೀಜಿ

ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಭಕ್ತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಪಿಎಸ್ ವಸ್ತ್ರದ್ ಅವರನ್ನು ಮುರುಘಾಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಅವರು ಈ ಹಿಂದೆ ಆದೇಶ ಹೊರಡಿಸಿದ್ದರು.

ಮಠದ ಲೆಕ್ಕಪತ್ರ ನಿರ್ವಹಣೆ, ಮಠದ ಚರ ಸ್ಥಿರಾಸ್ತಿ ಹಿತದೃಷ್ಟಿಯಿಂದ ಆಡಳಿತಾಧಿಕಾರಿ ನೇಮಿಸಲಾಗಿದ್ದು, ವಸ್ತ್ರದ್ ಅವರು ಮುರುಘಾಮಠದ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಆದರೆ ಇದಕ್ಕೆ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಅಲ್ಲದೇ ಈ ಬಗ್ಗೆ ಡಿ.ಎಸ್.ಮಲ್ಲಿಕಾರ್ಜುನ ಸೇರಿದಂತೆ ಹಲವರು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕಳೆದ ಹಲವು ತಿಂಗಳಿಂದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮೇ 22 ಅಂತಿಮವಾಗಿ ಸರ್ಕಾರದ ಆಡಳಿತಾಧಿಕಾರಿ ನೇಮಕವನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:43 pm, Tue, 13 June 23