ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ: ಟೈರ್ ಸ್ಫೋಟಗೊಂಡು ಲಾರಿ ಪಲ್ಟಿ, ನಾಲ್ವರ ದುರ್ಮರಣ
ಗದಗ ಜಿಲ್ಲೆ ಹುಯಿಲಗೋಳ್ ನಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೈರ್ ಸ್ಫೋಟಗೊಂಡ ಕಾರಣ ಪಲ್ಟಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೈರ್ ಸ್ಫೋಟಗೊಂಡು ಲಾರಿ ಪಲ್ಟಿಯಾಗಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಗದಗ ಜಿಲ್ಲೆ ಹುಯಿಲಗೋಳ್ ನಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೈರ್ ಸ್ಫೋಟಗೊಂಡ ಕಾರಣ ಪಲ್ಟಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ. ಗದಗ ಮೂಲದ ಹನುಮಪ್ಪ(30), ಪ್ರಶಾಂತ(28), ಗುರಪ್ಪ(30), ರಮೇಶ(30) ಮೃತ ದುರ್ದೈವಿಗಳು. ಇನ್ನು ಘಟನೆ ವೇಳೆ ಲಾರಿ ಪಲ್ಟಿಯಾಗುತ್ತಿದ್ದಂತೆ ಹಿಂಬದಿ ಚಲಿಸುತ್ತಿದ್ದ ಒಂದು ಕಾರು, ಆರು ಲಾರಿ ಡಿಕ್ಕಿ ಹೊಡೆದುಕೊಂಡಿದೆ. ಸರಣಿ ಅಪಘಾತದಲ್ಲಿ 10ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿರಿಯೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಹುಯಿಲಗೋಳ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರ ಕುಟುಂಬದಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ.
ಟಾಟಾ ಏಸ್, ಕಾರಿನ ಮಧ್ಯೆ ಡಿಕ್ಕಿ-ನಾಲ್ವರಿಗೆ ಗಾಯ ಇನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ಟಾಟಾ ಏಸ್ ನುಗ್ಗಿದೆ. ಟಾಟಾ ಏಸ್ ಗೆ ಹಿಂಬದಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಟಾಟಾ ಏಸ್ & ಕಾರಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ಬದಿಯ ಟೀಸ್ಟಾಲ್, ಬೀಡಾ ಸ್ಟಾಲ್ ಗಳಿಗೆ ಹಾನಿಯಾಗಿದೆ. ಸದ್ಯ ಅಂಗಡಿಗಳು ಬಂದ್ ಆಗಿದ್ದರಿಂದ ಅನಾಹುತ ತಪ್ಪಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೀಟರ್‌ನಲ್ಲಿ ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವು ನೀರು ಕಾಯಿಸುವ ಹೀಟರ್ನ ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರಿನಲ್ಲಿ ನಡೆದಿದೆ. ರೇಣುಕಮ್ಮ(23) ಮೃತ ಗೃಹಿಣಿ. ಬೆಳಗ್ಗೆ ಸ್ನಾನಕ್ಕೆ ನೀರು ಕಾಯಿಸುವಾಗ ಘಟನೆ ನಡೆದಿದೆ. ಸ್ವಿಚ್ ಆಫ್ ಮಾಡದೇ ನೀರಿನಲ್ಲಿ ಕೈ ಇಟ್ಟಾಗ ವಿದ್ಯುತ್ ಸ್ಪರ್ಶಿಸಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ರೇಣುಕಮ್ಮ ಬದುಕುಳಿಯಲಿಲ್ಲ.
ತೆಪ್ಪ ಮಗುಚಿ ರೈತ ನೀರು ಪಾಲು ಶಿವಮೊಗ್ಗ ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ತೆಪ್ಪ ಮಗುಚಿ ರೈತ ನೀರು ಪಾಲಾಗಿದ್ದು ಇನ್ನೋರ್ವ ರೈತ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಶರಾವತಿ ಹಿನ್ನೀರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆಪ್ಪದಲ್ಲಿ ಅಡಕೆ ಸಾಗಾಟ ವೇಳೆ ಈ ದುರ್ಘಟನೆ ನಡೆದಿದೆ. ತೆಪ್ಪ ಮಗುಚಿದ್ದರಿಂದ ಶರಾವತಿ ಹಿನ್ನೀರಿನಲ್ಲಿ ಸ್ವಾಮಿ ಮಾವಿನಗುಡ್ಡೆ (50) ನೀರು ಪಾಲಾಗಿದ್ದಾರೆ. ತೆಪ್ಪದಲ್ಲಿದ್ದ ಮತ್ತೊಬ್ಬ ಕೃಷಿಕ ನಾರಾಯಣ ಚಂಗೋಳ್ಳಿ ಬಚಾವ್ ಆಗಿದ್ದಾರೆ. ತೆಪ್ಪದಲ್ಲಿ ಅಡಕೆ ತುಂಬಿಕೊಂಡು ಬರುವಾಗ ಗಾಳಿಯ ರಭಸಕ್ಕೆ ತೆಪ್ಪ ಮಗುಚಿದೆ. ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ರೈತ ಸ್ವಾಮಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕ್ರಿಸ್ಮಸ್ಗೆ ಮನೆಯಲ್ಲೇ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿ; ವಿಧಾನ ಹೀಗಿದೆ
Published On - 8:47 am, Mon, 13 December 21