ಆಶ್ರಯ ಯೋಜನೆಯಲ್ಲಿ ಗೋಲ್ಮಾಲ್​; ಮನೆಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಅರ್ಹರಿಗೆ ಸಿಗದ ಸೂರು

ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಸರ್ಕಾರದ ಧ್ಯೇಯ ಎಂದು ಹೇಳಲಾಗುತ್ತದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಬಡವರಿಗೆ ನೀಡುವ ಆಶ್ರಯ ಮನೆಗಳು ಉಳ್ಳವರ ಪಾಲಾಗಿವೆ. ನಿರಾಶ್ರಿತರು ಸೂರಿಗಾಗಿ ಸರ್ಕಾರಿ ಕಚೇರಿಗೆ ಅಲೆದಲೆದು ಹೈರಾಣಾಗುತ್ತಲೇ ಇದ್ದಾರೆ.

ಆಶ್ರಯ ಯೋಜನೆಯಲ್ಲಿ ಗೋಲ್ಮಾಲ್​; ಮನೆಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಅರ್ಹರಿಗೆ ಸಿಗದ ಸೂರು
ಮನೆಗಾಗಿ ಮನವಿ ಮಾಡುತ್ತಿರುವ ವಸತಿ ವಂಚಿತರು
Edited By:

Updated on: Oct 14, 2023 | 8:45 PM

ಚಿತ್ರದುರ್ಗ, ಅ.14: ನಗರದಲ್ಲಿ ವಿವಿಧೆಡೆ ಆಶ್ರಯ ಲೇಔಟ್ ನಿರ್ಮಿಸಲಾಗಿದ್ದು, ಪ್ರತಿವರ್ಷ ನೂರಾರು ಮನೆಗಳನ್ನು ನೀಡಲಾಗಿದೆ. ಆದ್ರೆ, ಈ ಹಿಂದಿನ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹಣ ನೀಡಿದವರಿಗೆ ಅಕ್ರಮವಾಗಿ ಆಶ್ರಯ ಮನೆ (Ashraya Home) ವಿತರಣೆ ಮಾಡಿದ್ದಾರೆ. ಪರಿಣಾಮ ಅರ್ಹ ಫಲಾನುಭವಿಗಳು ಆಶ್ರಯ ಯೋಜನೆಯಿಂದ ವಂಚಿತರಾಗಿದ್ದು, ನಿರಾಶ್ರಿತರಾಗಿಯೇ ಉಳಿದಿದ್ದಾರೆ. ಉಳ್ಳವರು ಹಣ ನೀಡಿ ಡಬಲ್, ತ್ರಿಬಲ್ ಮನೆಗಳನ್ನು ಪಡೆದಿದ್ದಾರೆ. ಸರ್ಕಾರಕ್ಕೆ ಹಣ ಭರ್ತಿ ಮಾಡಿಯೂ ಸಹ ಸೂರಿಲ್ಲದೆ ಗುಡಿಸಲುಗಳಲ್ಲಿ, ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿ ವಾಸಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಿವೇಶನದ ಹಕ್ಕು ಪತ್ರವಿದ್ದರೂ ಸಹ ನಮ್ಮ ನಿವೇಶನ ಯಾವುದು, ಎಲ್ಲಿದೆ ನಮ್ಮ ಸೂರು ಎಂಬುದು ತಿಳಿಯದೆ ಕಂಗಾಲಾಗಿದ್ದೇವೆ. ಉಳ್ಳವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಲಂಚ ನೀಡಿ ನಿವೇಶನ, ಆಶ್ರಯ ಮನೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆಶ್ರಯ ಮನೆ ವಂಚಿತರು ಕಿಡಿಕಾರಿದ್ದಾರೆ.  ಐದು ವರ್ಷಗಳ ಹಿಂದೆ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಕಾರ್ಪೋರೇಷನ್​ನಿಂದ ನಿವೇಶನ, ಮನೆಗಳನ್ನು ನೀಡಲಾಗಿತ್ತು. ಆ ಪೈಕಿ 124 ಮನೆಗಳನ್ನು ಅಕ್ರಮವಾಗಿ ನೀಡಿರುವ ಬಗ್ಗೆ ತನಿಖೆ ನಡೆಯಬೇಕಿದೆ. ನೂತನ ಶಾಸಕ ಕೆ.ಸಿ.ವಿರೇಂದ್ರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ನಿವೇಶನ ಮತ್ತು ಮನೆಗಳನ್ನು ನೀಡಬೇಕು ಎಂಬುದು ವಂಚಿತರ ಆಗ್ರಹವಾಗಿದೆ.

ಇದನ್ನೂ ಓದಿ:ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆರೋಪ: ಮೊಬೈಲ್ ಟವರ್ ಏರಿದ ದಂಪತಿ, ಯಾವೂರಲ್ಲಿ?

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ನೂರಾರು ಜನ ಕಾರ್ಮಿಕರು, ಬಡ ಜನರು ಸೂರಿಲ್ಲದೆ ಗುಡಿಸಲು, ವಾಸಿಸಲು
ಯೋಗ್ಯವಲ್ಲದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ