ಚಿತ್ರದುರ್ಗದಲ್ಲಿ ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ ಹಬ್ಬ, ಮನೆ ಮನೆಗಳಿಂದ ಸೀರೆ, ಉಡುಗೊರೆ ನೀಡಿದ ಜನರು
ಚಿತ್ರದುರ್ಗ ತಾಲೂಕಿನ ಕೋಗುಂಡೆ ಗ್ರಾಮದಲ್ಲಿ ನಿವೃತ್ತ ಶಿಕ್ಷಕಿಯೊಬ್ಬರಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಯೊತು. ಗ್ರಾಮದ ಮನೆಮನೆಗಳಿಂದ ಸೀರೆ ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.
ಚಿತ್ರದುರ್ಗ: ಸರ್ಕಾರಿ ಶಾಲಾ ಶಿಕ್ಷಕರು ನಿವೃತ್ತಿಯಾದರೆ ಅವರಿಗೆ ಒಂದು ಬೀಳ್ಕೊಡುಗೆ ಸಮಾರಂಭ ಮಾಡಿ ಉಡುಗೊರೆ ನೀಡಿ ಗೌರವಿಸುವದು ಸಾಮಾನ್ಯ. ಆದರೆ ಚಿತ್ರದುರ್ಗ (Chitradurga) ತಾಲೂಕಿನ ಕೋಗುಂಡೆ ಗ್ರಾಮದಲ್ಲಿ ಇಂದು ವಯೋನಿವೃತ್ತಿ ಹೊಂದಿದ ಶಿಕ್ಷಕಿ ಕೆ.ಬಿ.ನಾಗರತ್ನಮ್ಮ ಅವರ ಬೀಳ್ಕೊಡಿಗೆ (Farewell) ಸಮಾರಂಭ ಮಾತ್ರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರಾಕ್ಟರ್ನಲ್ಲಿ ಶಿಕ್ಷಕಿಯನ್ನು ಕೂರಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಯಾಗಿ ಮೆರವಣಿಗೆ ನಡೆಸಲಾಯಿತು. ಪ್ರತಿ ಮನೆಯ ಮಹಿಳೆಯರು ಶಿಕ್ಷಕಿ ಬಳಿ ಆಗಮಿಸಿ ಪ್ರೀತಿಯ ಹೂಹಾರ ಹಾಕಿ ನಮಸ್ಕರಿಸಿ ಆತ್ಮೀಯವಾಗಿ ಗೌರವಿಸಿದರು.
ಇತ್ತ ಶಿಷ್ಯಂದಿರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ನೃತ್ಯ ಮಾಡುತ್ತಾ ನೆಚ್ಚಿನ ಶಿಕ್ಷಕಿಯ ಕೊನೆ ದಿನದ ಸೇವೆಯನ್ನು ಅವಿಸ್ಮರಣೀಯವಾಗಿಸಿದರು. ಅಲ್ಲದೆ, ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆ ವತಿಯಿಂದ ಸಮಾರಂಭ ಏರ್ಪಡಿಸಿ ಶಿಕ್ಷಕಿಯ ಸೇವೆಯನ್ನು ಸ್ಮರಿಸಿದರು. ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: Viral Video: ಟೀಚರ್ ಡ್ರೆಸ್ ಮೇಲೆ ಮಕ್ಕಳ ಡ್ರಾಯಿಂಗ್; ಹೀಗೊಂದು ಮಧುರ ಬೀಳ್ಕೊಡುಗೆ
ಶಿಕ್ಷಕಿಗೆ ಮನೆ ಮನೆಗಳಿಂದ ಸೀರೆ, ಇತರೆ ಉಡುಗೊರೆ ನೀಡಿ ತವರು ಮನೆಯ ಮಗಳಂತೆ ಹಾರೈಸಲಾಯಿತು. ದೂರದ ಊರುಗಳಿಂದ ಬಂದಿದ್ದ ನೂರಾರು ಶಿಷ್ಯರು ಶಿಕ್ಷಕಿಗೆ ಸನ್ಮಾನಿಸಿ ಕೃತಜ್ಞತೆ ಅರ್ಪಿಸಿದರು. ಶಾಲಾ ಆವರಣದಲ್ಲಿ ನಿವೃತ್ತ ಶಿಕ್ಷಕಿಯಿಂದ ಅರಳಿ ಗಿಡ ಹಾಕಿಸಿ ಶಾಲೆಯಲ್ಲಿ ಶಿಕ್ಷಕಿಯ ನೆನಪು ಅವಿಸ್ಮರಣೀಯ ಆಗುವಂತೆ ಮಾಡಲಾಯಿತು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ.ವಿ.ಶರಣಪ್ಪ, ಇಪ್ಕೋ ನಿರ್ದೇಶಕ ಎಚ್.ಎಂ.ಮಂಜುನಾಥ್, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ನಿವೃತ್ತ ಶಿಕ್ಷಕಿಗೆ ಸನ್ಮಾನಿಸಿ ಶುಭ ಹಾರೈಸಿದರು. ಹಾಲಿ ಶಾಲೆಯ ಮುಖ್ಯ ಶಿಕ್ಷಕಿ ಕೂಡ ನಾಗರತ್ನಮ್ಮ ಅವರ ಶಿಷ್ಯೆ ಆಗಿದ್ದು, ಇವರ ಬಳಿ ಕಲಿತವರು ಹಲವು ಉನ್ನತ ಹುದ್ದೆಗಳಲ್ಲಿದ್ದಾರೆ. ಇತರೆ ಸ್ವ ಉದ್ಯೋಗಗಳಲ್ಲಿ ಹೆಸರು ಮಾಡಿದ್ದಾರೆ.
ಜನ ಮೆಚ್ಚಿದ ಶಿಕ್ಷಕಿ, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ನಾಗರತ್ನಮ್ಮ ಅವರು ಇದೇ ಶಾಲೆಯಲ್ಲಿ ಉದ್ಯೋಗ ಆರಂಭಿಸಿ ಇದೇ ಶಾಲೆಯಲ್ಲಿ ಬರೋಬ್ಬರಿ 40 ವರ್ಷ 9 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಮತ್ತೊಂದು ವಿಶೇಷ. ಮನೆ ಮಾತಾಗಿದ್ದ ಶಿಕ್ಷಕಿಯನ್ನು ಇಂದು ಇಡೀ ಕೋಗುಂಡೆ ಗ್ರಾಮದ ಜನರು ಹಬ್ಬದಂತೆ ಸಂಭ್ರಮದಿಂದ ಶಿಕ್ಷಕಿಯನ್ನು ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ