ಅಂದು ಓದಿನಲ್ಲಿ ಹಿಂದೆ ಬಿದ್ದವ, ಫೈನ್ ಆರ್ಟ್ ಓನಾಮ ಕಲಿತು ಅಯೋಧ್ಯೆಗೆ ಗಣೇಶನ ವಿಗ್ರಹ ಮಾಡಿಕೊಟ್ಟಿದ್ದಾನೆ
ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮಡಿವಾಳ ಸಮುದಾಯದ ನಂಜುಂಡಸ್ವಾಮಿ ಅವರ ಪುತ್ರ ಕೀರ್ತಿ ಓದಿನಲ್ಲಿ ಹಿಂದೆ ಬಿದ್ದಾಗ ಅವರಪ್ಪ ಎಸ್ ಜೆ ಎಂ ಕಾಲೇಜಿನಲ್ಲಿ ಫೈನ್ ಆರ್ಟ್ ಗೆ ಅಡ್ಮಿಷನ್ ಮಾಡಿಸಿದ್ದರು. ಇದೀಗ ಕೋಟೆನಾಡಿನ ಯುವಕ ಕೀರ್ತಿ ತನ್ನ ಕೈಚಳಕದಲ್ಲಿ ವಿನಾಯಕನ ವಿಗ್ರಹ ಕೆತ್ತನೆ ಮಾಡಿ ಅಯೋಧ್ಯೆಗೆ ಕಳಿಸಿದ್ದಾನೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ( Ram Mandir Inauguration) ಕಾರ್ಯದ ದಿನಗಣನೆ ಶುರುವಾಗಿದೆ. ಚಿತ್ರದುರ್ಗದ ಯುವ ಶಿಲ್ಪಿ ಕೀರ್ತಿ ಸಹ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ವಿಘ್ನನಿವಾರಕ ವಿನಾಯಕನ ಮೂರ್ತಿ ಕೆತ್ತನೆ ಕೆಲಸ ಮೂಲಕ ಕೋಟೆನಾಡಿನ ಕೀರ್ತಿ ನಾಡಿನಲ್ಲಿ ಕೀರ್ತಿ ಪತಾಕೆ ಹಾರಿಸಿದ್ದಾನೆ. ಕರಸೇವಕ ನಂಜುಂಡಸ್ವಾಮಿ ಪುತ್ರನಿಗೆ ಆತ್ಮಸ್ಥೈರ್ಯ ತುಂಬಿ ಕಳಿಸಿದ್ದು ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾಗುವ ಭಾಗ್ಯ ಪುತ್ರನಿಗೆ ಲಭಿಸಿದ್ದು ಖುಷಿ ಎಂದಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಭವ್ಯ ರಾಮಮಂದಿರದಲ್ಲಿ ಕೋಟೆನಾಡಿನ ಯುವಕ ಕೀರ್ತಿ ಕೈಚಳಕ. ವಿಘ್ನ ನಿವಾರಕ ವಿನಾಯಕ ವಿಗ್ರಹ ಕೆತ್ತನೆ ಕೆಲಸ ಪೂರ್ಣಗೊಳಿಸಿರುವ ಕೀರ್ತಿ. ಕರಸೇವಕ ನಂಜುಂಡಸ್ವಾಮಿ ಪುತ್ರನಿಗೆ ದಕ್ಕಿದ ರಾಮಮಂದಿರ ಸೇವಾಕಾರ್ಯ. ಹೌದು, ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ಮಡಿವಾಳ ಸಮುದಾಯದ ನಂಜುಂಡಸ್ವಾಮಿ ಕಾಯಕ ವೃತ್ತಿ ಮಾಡಿಕೊಂಡಿದ್ದರು. ಪುತ್ರ ಕೀರ್ತಿ ಓದಿನಲ್ಲಿ ಹಿಂದೆ ಬಿದ್ದಾಗ ಎಸ್ ಜೆ ಎಂ ಕಾಲೇಜಿನಲ್ಲಿ ಫೈನ್ ಆರ್ಟ್ ಗೆ (ಲಲಿತಕಲೆ) ಅಡ್ಮಿಷನ್ ಮಾಡಿದ್ದರು. ಬಳಿಕ ಕಾರ್ಕಳದಲ್ಲಿ ನಾಗೇಶ್ ಆಚಾರಿ, ಗುಣವಂತೇಶ್ವರ್ ಅವರ ಬಳಿ ಶಿಲ್ಪಕಲೆ ಬಗ್ಗೆ ತರಬೇತಿ ಪಡೆದಿದ್ದರು.
ಬಳಿಕ ಚಿತ್ರದುರ್ಗದಲ್ಲಿ ಸನಾತನ ಕಲಾ ವೈಭವ ಎಂಬುದಾಗಿ ಶಾಪ್ ಓಪನ್ ಮಾಡಿದ್ದರು. ದೇವರ ವಿಗ್ರಹಗಳು, ವ್ಯಕ್ತಿ ಕಲಾಕೃತಿಗಳು ಮತ್ತು ನಾಗ ವಿಗ್ರಹಗಳ ಕೆತ್ತನೆ ಮಾಡುವ ಕೆಲಸದಲ್ಲಿ ಕೀರ್ತಿ ತೊಡಗಿದ್ದನು. ಕೆಲ ದಿನಗಳ ಹಿಂದೆ ರಾಮಮಂದಿರದಲ್ಲಿ ಶಿಲ್ಪ ಕಲೆ ಕೆಲಸಕ್ಕೆ ಹುಬ್ಬಳ್ಳಿ ಮೂಲದ ರವಿ ಆಚಾರ್ ಅವರು ಆಹ್ವಾನಿಸಿದರು.
ಆದ್ರೆ, ಆರಂಭದಲ್ಲಿ ಕೀರ್ತಿ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕಿದ್ದನು. ನಾನು ಈ ಹಿಂದೆ ರಾಮಮಂದಿರಕ್ಕಾಗಿ ಕರಸೇವಕನಾಗಿ ಹೋರಾಟ ನಡೆಸಿದ್ದವನು. ಹೀಗಾಗಿ, ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸುವ ಅವಕಾಶ ಸಿಕ್ಕಿದ್ದು ಭಾಗ್ಯ ಎಂದು ಹೇಳಿ ಪುತ್ರ ಕೀರ್ತಿಗೆ ಅಯೋಧ್ಯೆಗೆ ಕಳಿಸಿದ್ದೇನೆ. ವಿಘ್ನ ನಿವಾರಕ ವಿನಾಯಕನ ಮೂರ್ತಿ ಕೆತ್ತನೆ ಕೆಲಸವನ್ನು ಕೀರ್ತಿ ಪೂರೈಸಿದ್ದು ಮೂರು ದಿನದಲ್ಲಿ ದುರ್ಗಕ್ಕೆ ಬರಲಿದ್ದಾನೆ. ನಾವು ಸಹ ರಾಮಮಂದಿರ ಲೋಕಾರ್ಪಣೆ ಬಳಿಕ ದೇಗುಲ ದರ್ಶನಕ್ಕೆ ಹೋಗುತ್ತೇವೆ ಅಂತಾರೆ ನಂಜುಂಡಸ್ವಾಮಿ.
ಇನ್ನು ಚಿತ್ರದುರ್ಗದ ಶಿಲ್ಪಿ ಕೀರ್ತಿ ನಂಜುಂಡಸ್ವಾಮಿಗೆ ರಾಮಮಂದಿರದಲ್ಲಿ ವಿನಾಯಕನ ವಿಗ್ರಹ ರಚನೆಗೆ ಅವಕಾಶ ಸಿಕ್ಕಿದ್ದು ಇಡೀ ಕುಟುಂಬಕ್ಕೆ ಖುಷಿ ಮೂಡಿಸಿದೆ. ಕೀರ್ತಿಯ ಕೈಚಳಕದಲ್ಲಿ ಅರಳಿದ ವಿನಾಯಕನ ವಿಗ್ರಹ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾನ ಪಡೆದಿದ್ದಕ್ಕೆ ಚಿತ್ರದುರ್ಗ ಮಾತ್ರವಲ್ಲ ಇಡೀ ನಾಡಿನ ಜನರಿಗೆ ಹೆಮ್ಮೆ ಮೂಡಿಸುತ್ತಿದೆ. ಅಂತೆಯೇ ಕೀರ್ತಿ ಅವರ ದೊಡ್ಡಪ್ಪ ತಿಪ್ಪೇಸ್ವಾಮಿ ಸಹ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಹಿಂದೆ ನಾವೆಲ್ಲಾ ರಾಮಮಂದಿರಕ್ಕಾಗಿ ಕರಸೇವಕರಾಗಿ ಅನೇಕ ಹೋರಾಟದಲ್ಲಿ ಭಾಗಿ ಆಗಿದ್ದೆವು. ಈಗ ನಮ್ಮ ಕುಟುಂಬದ ಕೀರ್ತಿಗೆ ರಾಮಮಂದಿರ ನಿರ್ಮಾಣದಲ್ಲಿ ಶಿಲ್ಪಿಯಾಗುವ ಅವಕಾಶ ಸಿಕ್ಕಿದ್ದು ಖುಷಿ ಅಂತಾರೆ.
ಒಟ್ಟಾರೆಯಾಗಿ ಕೋಟೆನಾಡಿನ ಶಿಲ್ಪಿ ಕೀರ್ತಿ ಅಯೋಧ್ಯೆಯ ರಾಮಮಂದಿರದಲ್ಲಿ ವಿಘ್ನ ನಿವಾರಕ ವಿನಾಯಕನ ಮೂರ್ತಿ ಕೆತ್ತನೆ ಕಾರ್ಯದಲ್ಲಿ ಭಾಗಿಯಾಗಿದ್ದು ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಶಿಲ್ಪಿ ವಿನಾಯಕ ಮತ್ತು ಕುಟುಂಬ ಪುತ್ರನ ಸಾಧನೆ ಕಂಡು ಭಾರೀ ಖುಷಿಯಲ್ಲಿ ತೇಲುತ್ತಿದ್ದಾರೆ. ಮೂರು ದಿನದಲ್ಲಿ ಕೀರ್ತಿ ಚಿತ್ರದುರ್ಗಕ್ಕೆ ವಾಪಸ್ ಆಗಲಿದ್ದು ಸಂಭ್ರಮಿಸಲು ಕಾತುರರಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ