ಚಿತ್ರದುರ್ಗ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ ಜೋಡೋ ಯಾತ್ರೆ (Bharat Jodo Yatra) ಚಿತ್ರದುರ್ಗಕ್ಕೆ ಕಾಲಿಟ್ಟಿದ್ದು, ಇಂದು ಹಿರಿಯೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಉಳ್ಳೇರಹಳ್ಳಿಯಲ್ಲಿ ಬಹಿಷ್ಕಾರಕ್ಕೆ ಒಳಪಟ್ಟಿದ್ದ ದಲಿತ ಬಾಲಕ ಚೇತನ್ ಕುಟುಂಬ ಭಾಗಿಯಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಸೆ. 22 ರಂದು ದಲಿತ ಬಾಲಕ ಚೇತನ್ ದೇವರ ಉತ್ಸವದ ಊರುಗೋಲು ಮುಟ್ಟಿದ್ದಕ್ಕೆ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿತ್ತು.
ಭೂತಮ್ಮ ದೇವಿ ಉತ್ಸವದ ವೇಳೆ ಬಿದ್ದ ಊರುಗೋಲು ಮುಟ್ಟಿದ್ದೇ ತಪ್ಪಾಯ್ತಾ..!
ಕಳೆದ ಸೆ.7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವರ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲ ಅಥವಾ ಊರುಗೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್ ಎಂಬಾತ ಮುಟ್ಟಿ ಎತ್ತಿಕೊಟ್ಟಿದ್ದ. ಇದೇ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಆ ಬಾಲಕನನ್ನು ನಿಂದಿಸಿ ದಲಿತ ಜನಾಂಗಕ್ಕೆ ಸೇರಿದ ನೀನು ದೇವರ ಊರುಗೋಲು ಮುಟ್ಟಿ ಅಪಚಾರ ಮಾಡಿದ್ಯಾ ಎಂದು ಹೀಯಾಳಿಸಿದ್ದರು. ಜೊತೆಗೆ ಆ ಬಾಲಕ ತಂದೆ ರಮೇಶ್ ಹಾಗೂ ತಾಯಿ ಶೋಭಾರನ್ನು ಕರೆಸಿ ಜಾತಿನಿಂದನೆ ಮಾಡಿ ಬೆದರಿಸಿದ್ದರು.
ಊರಿನಲ್ಲಿ ನ್ಯಾಯ ಪಂಚಾಯ್ತಿ 60 ಸಾವಿರ ದಂಡ, ಬಹಿಷ್ಕಾರದ ಬೆದರಿಕೆ..!
ಘಟನೆ ನಡೆದ ನಂತರ ಊರಿನ ಕೆಲವು ಹಿರಿಯರೆಲ್ಲಾ ಸೇರಿ ಇದೇ ವಿಚಾರವಾಗಿ ನ್ಯಾಯ ಪಂಚಾಯ್ತಿ ಸೇರಿದ್ದಾರೆ. ಇತ್ತೀಚೆಗಷ್ಟೇ ಗ್ರಾಮದ ಭೂತಮ್ಮ ದೇವಿಯ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯಲಾಗಿತ್ತು. ಜೊತೆಗೆ 60 ಸಾವಿರ ಖರ್ಚು ಮಾಡಿ ಉತ್ಸವ ಮೂರ್ತಿಯನ್ನು ಮಾಡಿಸಲಾಗಿತ್ತು. ಇಷ್ಟೆಲ್ಲಾ ಮಾಡಿಯಾದ ಮೇಲೆ ಗ್ರಾಮದಲ್ಲಿ ಉತ್ಸವ ಮಾಡಲಾಗಿತ್ತು. ಈ ವೇಳೆ ದಲಿತ ಜನಾಂಗಕ್ಕೆ ಸೇರಿದ ಬಾಲಕ ದೇವರ ಉತ್ಸವ ಮೂರ್ತಿಯ ಊರುಕೋಲು ಮುಟ್ಟಿದ ಅನ್ನೋ ಕಾರಣಕ್ಕೆ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿದ್ದು ಒಂದು ವೇಳೆ ದಂಡ ಕಟ್ಟದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದ್ದರು. ಕೊನೆಗೆ ಗ್ರಾಮಕ್ಕೆ ಅಧಿಕಾರಿಗಳು, ಶಾಸಕರು, ಸಂಸದರು ಮತ್ತು ಸಂಘಟನೆಯವರು ರಾಜಿ ಸಂಧಾನ ಮಾಡಿ ಪ್ರಕರಣಕ್ಕೆ ಸುಖ್ಯಾಂತ್ಯ ಹಾಡಿದ್ದರು.
ಭಾರತ್ ಜೋಡೋ ಯಾತ್ರೆಯಿಂದ ಒಂದಾದ ಲಿಂಗಾಯತರು-ದಲಿತರು
ಭಾರತ ಜೋಡೋ ಯಾತ್ರೆಯು ಅ.2 ಗಾಂಧಿ ಜಯಂತಿಯಂದು ಮೈಸೂರಿನ ಬದನವಾಳು ಗ್ರಾಮಕ್ಕೆ ಕಾಲಿಟ್ಟಿತ್ತು. ಗ್ರಾಮದಲ್ಲಿ 1993ರಲ್ಲಿ ದೇವಸ್ಥಾನ ಲೋಕಾರ್ಪಣೆ ವಿಚಾರವಾಗಿ ವೀರಶೈವ ಹಾಗೂ ದಲಿತರ ನಡುವೆ ಗಲಾಟೆ ನಡೆದಿತ್ತು. ಹೀಗಾಗಿ ಎರಡು ಸಮುದಾಯದ ನಡುವೆ ವೈಷಮ್ಯ ಮೂಡಿತ್ತು. ಆದರೆ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಹಭೋಜನ ನಡೆಸುವ ಮೂಲಕ ಇಪ್ಪತ್ತೊಂಬತ್ತು ವರ್ಷಗಳ ನಂತರ ಈ ಹಳೇ ವೈಷಮ್ಯವನ್ನು ಶಮನ ಮಾಡಿದ್ದಾರೆ.
ದಲಿತರು, ಹಿಂದುಳಿದ ವರ್ಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ 28 ಜನರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಕೆ.ಸಿ ವೇಣುಗೋಪಾಲ್ ಮತ್ತಿತರ ನಾಯಕರ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Mon, 10 October 22