ಮುರುಘಾ ಶ್ರೀ ಪೋಕ್ಸೋ ಪ್ರಕರಣ: 4 ಮತ್ತು 5ನೇ ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
ಮುರುಘಾ ಶರಣರ ಪೋಕ್ಸೋ ಪ್ರಕರಣದಲ್ಲಿ ನಾಲ್ಕು ಮತ್ತು ಐದನೇ ಆರೋಪಿಗಳಾದ ಮಠದ ಕಾರ್ಯದರ್ಶಿ ಪರಮಶಿವಯ್ಯ ಮತ್ತು ಗಂಗಾಧರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಚಿತ್ರದುರ್ಗ: ಮುರುಘಾ ಶರಣರ (Murugha Shri) ಪೋಕ್ಸೋ ಪ್ರಕರಣದಲ್ಲಿ (pocso Case) ನಾಲ್ಕು ಮತ್ತು ಐದನೇ ಆರೋಪಿಗಳಾದ ಮಠದ ಕಾರ್ಯದರ್ಶಿ ಪರಮಶಿವಯ್ಯ ಮತ್ತು ಗಂಗಾಧರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಮತ್ತು 5ನೇ ಆರೋಪಿ ವಕೀಲ ಗಂಗಾಧರಯ್ಯ.
ಭಕ್ತರ ವೇಷದಲ್ಲಿ ಮಠದಲ್ಲಿದ್ದ ಫೋಟೋಗಳನ್ನು ಕಳ್ಳತನ ಮಾಡಲಾಗಿದೆ
ಮುರುಘಾ ಮಠದಲ್ಲಿದ್ದ ಪೋಟೋಗಳನ್ನು ಉದ್ದೇಶ ಪೂರ್ವಕವಾಗಿ ಪಟ್ಟಭದ್ರ ಹಿತಾಸಕ್ತಿ ವಯ್ಯಕ್ತಿಗಳು ಕಳ್ಳತನ ಮಾಡಿದ್ದಾರೆ ಎಂದು ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ ಶಂಕೆ ವ್ಯಕ್ತಪಡಿಸಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿದ್ದ ಗಣ್ಯರೊಂದಿಗೆ ತೆಗೆಸಿಕೊಂಡಿದ್ದ ಮುರುಘಾ ಶರಣರಿದ್ದ 47 ಪೋಟೋಗಳು ಕಳ್ಳತನವಾಗಿತ್ತು. ಈ ಕುರಿತು ಮಹಾಂತ ರುದ್ರೇಶ್ವರಶ್ರೀ ಮಾತನಾಡಿ ಭಕ್ತರ ವೇಷದಲ್ಲಿ ಬಂದು 47 ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ. ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳು ಕೂಡ ಕಳ್ಳತನವಾಗಿವೆ ಎಂದು ತಿಳಿಸಿದ್ದಾರೆ.
ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ ಫೋಟೋಗಳ ಕಳ್ಳತನ ಮಾಡಿದ್ದಾರೆ. ಗೊತ್ತಿರುವವರೇ ಮಠದ ಫೋಟೋಗಳ ಕಳ್ಳತನ ಮಾಡಿರಬಹುದು. ಎಸ್ಜೆಎಂ ಸಂಸ್ಥೆಯ ಕೆಲವು ನೌಕರರು ಭಾಗಿಯಾಗಿರಬಹುದು. ಈ ಬಗ್ಗೆ SJM ಕಾರ್ಯದರ್ಶಿ ಎಸ್.ಬಿ.ವಸ್ತ್ರದ ಮಠ ದೂರು ನೀಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಅತ್ಯಮೂಲ್ಯ ವಸ್ತುಗಳು ಇವೆ. ಮಠಕ್ಕೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಮಹಾಂತ ರುದ್ರೇಶ್ವರಶ್ರೀ ಹೇಳಿದ್ದಾರೆ.
ಶಿವಮೂರ್ತಿ ಶರಣರ ಅನುಪಸ್ಥಿತಿಯಲ್ಲಿ ಮುರುಘಾ ಮಠದ ಶೂನ್ಯ ಪೀಠಾರೋಹಣ
ನಗರದ ಮುರುಘಾಮಠದಲ್ಲಿ ಅ.6 ರಂದು ಮುರುಘಾ ಮಠದ ಪರಂಪರೆಯ ಪ್ರವರ್ತಕರಾದ ಶಾಂತವೀರ ಮುರುಘಾಶ್ರೀ ಚಿತ್ರಪಟ ಹಾಗೂ ಪಾದುಕೆಯ ಶೂನ್ಯಪೀಠಾರೋಹಣ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಪೊಕ್ಸೊ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಧಾರ್ಮಿಕ ವಿಧಿಗಳನ್ನು ಸರಳವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಮಾಜಿ ಶಾಸಕ ಹಾಗೂ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ದಂಪತಿ ಸಹ ಮಠಕ್ಕೆ ಆಗಮಿಸಿದ್ದರು.
ಶಿವಮೂರ್ತಿ ಮುರುಘಾ ಶರಣರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಸವರಾಜನ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತಡೆದರು. ಈ ವೇಳೆ ಕೆಲ ಸಮಯ ವಾಗ್ವಾದ ನಡೆಯಿತು. ಶೂನ್ಯಪೀಠಕ್ಕೆ ನಮನ ಸಲ್ಲಿಸಿದ ಬಳಿಕ ಬಸವರಾಜನ್ ಅವರು ಮೆರವಣಿಗೆಯಲ್ಲಿಯೂ ಭಾಗಿಯಾಗಿದ್ದರು. ಆರಂಭದ ದಿನಗಳಲ್ಲಿ ಶೂನ್ಯಪೀಠಾರೋಹಣ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಬಸವರಾಜನ್ ಕಳೆದ 15 ವರ್ಷಗಳಿಂದಲೂ ಉತ್ಸವದಿಂದ ದೂರವೇ ಉಳಿದಿದ್ದರು. ಯಾವುದೇ ಅಹಿತಕರ ಘಟನೆಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Mon, 10 October 22