ವಿರೋಧ ಪಕ್ಷದಲ್ಲೂ ನರೇಂದ್ರ ಮೋದಿಯಂಥ ಪ್ರಬಲ ನಾಯಕರು ಬರಲಿ; ರಾಹುಲ್ ಗಾಂಧಿ ಭೇಟಿಗೆ ಮೊದಲು ಶಿವಮೂರ್ತಿ ಮುರುಘಾ ಶರಣರ ಪ್ರತಿಕ್ರಿಯೆ
ರಾಹುಲ್ ಗಾಂಧಿ ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಹಲವು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಚಿತ್ರದುರ್ಗ: ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಹೊರಟಿರುವ ರಾಹುಲ್ ಗಾಂಧಿ ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಹಲವು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ರಾಹುಲ್ ಅವರನ್ನು ಶಾಸಕ ಟಿ.ರಘುಮೂರ್ತಿ ಹೂಮಾಲೆ ಹಾಕಿ ಸ್ವಾಗತಿಸಿ, ಮಠಕ್ಕೆ ಕರೆದೊಯ್ದರು.
ಮುರುಘಾಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ 20ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಸಂವಾದ ನಡೆಸಿದರು. ಚಿತ್ರದುರ್ಗದ ಮುರುಘಾಮಠದ ಸುತ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಮುರುಘಾಮಠದ ಸಭಾಂಗಣದಲ್ಲಿ ಐವತ್ತಕ್ಕೂ ಹೆಚ್ಚು ಆಸನಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಭೇಟಿಯ ವೇಳೆ ಲಿಂಗಪೂಜೆ ಬಗ್ಗೆ ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಕೋರಿದರು. ರಾಹುಲ್ಗೆ ಲಿಂಗಧಾರಣೆ ಮಾಡಿ ವಿಭೂತಿ ಹಚ್ಚಿದ ಶ್ರೀಗಳು ತತ್ವದ ಉಪದೇಶ ಮಾಡಿದರು. ಲಿಂಗಪೂಜೆಯ ನಿಯಮಗಳನ್ನು ಪಾಲಿಸುವುದಾಗಿ ರಾಹುಲ್ ಗಾಂಧಿ ಅರಿಕೆ ಮಾಡಿಕೊಂಡರು.
ಚಿತ್ರದುರ್ಗ ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಮಠದ ಪ್ರವೇಶಕ್ಕೆ ಪಾಸ್ ವಿತರಣೆಯಲ್ಲಿ ಗೊಂದಲವಾಯಿತು. ಈ ಸಂಬಂಧ ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್ ಅವರನ್ನು ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡರು. ಪಾಸ್ ಸಿಗದವರು ತಾಜ್ಪೀರ್ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಕೆಪಿಸಿಸಿ ಕಾರ್ಯದರ್ಶಿ ಸಾಸಲು ಸತೀಶ್, ಮುಖಂಡ ಡಾ.ತಿಪ್ಪೇಸ್ವಾಮಿ ದನಿ ಏರಿಸಿ ಮಾತನಾಡಿದರು.
ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಕೆಲ ಮಠಾಧೀಶರು ಇಂದು ಮುರುಘಾಮಠಕ್ಕೆ ಬರುತ್ತಾರೆ. ನೋಡುವವರಿಗೆ ಲಿಂಗಾಯತ ಮತ ಸೆಳೆಯುವ ಭಾವನೆ ಇರಬಹುದು. ಆದರೆ ನಮ್ಮಲ್ಲಿ ಆ ರೀತಿಯ ಭಾವನೆ ಇಲ್ಲದಿದ್ದರೆ ಆಯಿತು. ನಾವು ಸಮತೋಲನ ಕಾಯ್ದುಕೊಳ್ಳುತ್ತೇವೆ. ನಮಗೆ ಭಾರತ ದೇಶ ಬಹಳ ಮುಖ್ಯ ಎಂದರು.
ನಮಗೆ ದೇಶದ ಭದ್ರತೆ ಬಹಳ ಮುಖ್ಯ. ದೇಶದ ಸುತ್ತ ಶತ್ರುಗಳಿದ್ದಾರೆ. ಪ್ರಧಾನಿ ಮೋದಿಯಂತಹ ಬಲಿಷ್ಠ ನಾಯಕರು ಬೇಕಿದೆ. ಪರಿಶ್ರಮದಿಂದು ಬಂದು ದೇಶಕ್ಕೆ ಭದ್ರತೆಯ ಪ್ರಯತ್ನ ಮಾಡಿದರು. ವಿಪಕ್ಷಗಳಲ್ಲಿಯೂ ಅಂತಹ ಬಲಿಷ್ಠ ನಾಯಕ ಬರಲಿ ಎಂದು ಆಶಯ ವ್ಯಕ್ತಪಡಿಸಿದರು. ರಾಜ್ಯ ಅಥವಾ ರಾಷ್ಟ್ರದಲ್ಲಿ ಕೋಮು ದಳ್ಳುರಿ ತಾಂಡವ ಆಡಬೇಕೆಂದು ನಾವ್ಯಾರು ಬಯಸುವುದಿಲ್ಲ. ನಾವೆಲ್ಲೆರೂ ಶಾಂತಿಪ್ರಿಯರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಸುವ್ಯವಸ್ಥೆಯ ವಾತಾವರಣ ನಿರ್ಮಾಣವಾಗಬೇಕಿದೆ. ಶಾಂತಿ ಸಾಮರಸ್ಯದ ಕಡೆ ಎಲ್ಲರ ನಡೆ ಇರಬೇಕು. ಲಿಂಗಾಯತ ಸಮುದಾಯದ ಹೋರಾಟ ನಿರಂತರವಾಗಿರುತ್ತದೆ. ಸಮಾಜ ಬಾಂಧವರು ಸಂಕುಚಿತ ಮನೋಭಾವ ಬಿಡಬೇಕು ಎಂದು ಸಲಹೆ ಮಾಡಿದರು.
Published On - 11:50 am, Wed, 3 August 22