
ಚಿತ್ರದುರ್ಗ: ದೀಪಾವಳಿಯಲ್ಲಿ ಮನೆಗಳಲ್ಲಿ ಸಾಲು ಸಾಲು ದೀಪ ಹಚ್ಚುವುದು ಸಹಜ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಸಂಕ್ರಾಂತಿ ಹಬ್ಬದ ವೇಳೆ ದೀಪದಾರತಿ ಬೆಳಗಿ ಜನ ಸಂಭ್ರಮಿಸಿದ್ದಾರೆ. ಏನು ವಿಶೇಷ ಅಂತೀರಾ, ಈ ವರದಿ ನೋಡಿ.
ಒಂದು ಕಡೆ ದೇಗುಲದ ಆವರಣದಲ್ಲಿ ದೀಪ ಹಚ್ಚಿ ಲಕ್ಷ ದೀಪೋತ್ಸವಕ್ಕೆ ಚಾಲನೆ. ಮತ್ತೊಂದು ಕಡೆ ಮನೆಗಳ ಬಳಿ ದೀಪ ಬೆಳಗಿ ಸಂಕ್ರಾಂತಿ ಸಂಭ್ರಮ. ಅಯ್ಯಪ್ಪ ಸ್ವಾಮಿಗೆ ದೀಪದಾರತಿ ಬೆಳಗಿ ಭಕ್ತಿಯ ನಮನ ಮಾಡಲಾಗಿದೆ. ಕೋಟೆನಾಡು ಚಿತ್ರದುರ್ಗದ ಮೆದೇಹಳ್ಳಿ ಬಳಿಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಕಳೆದ 21 ವರ್ಷಗಳಿಂದ ಪ್ರತಿ ವರ್ಷ ಸಂಕ್ರಾಂತಿಯಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದ್ರೆ, ಕೊವಿಡ್ ಹರಡುವ ಭೀತಿ ಹಿನ್ನೆಲೆ ಈ ಬಾರಿ ಸಾಂಕೇತಿಕವಾಗಿ ದೇಗುಲದ ಆವರಣದಲ್ಲಿ ದೀಪ ಬೆಳಗಿಸಲಾಯಿತು.
ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ
ಈ ವರ್ಷ ದೇಗುಲದ ಆವರಣದಲ್ಲಿ ಲಕ್ಷದೀಪೋತ್ಸವ ಆಚರಿಸದ ಕಾರಣ ಭಕ್ತರ ಮನೆಗಳಿಗೇ ದೀಪಗಳನ್ನು ಕಳಿಸಲಾಗಿತ್ತು. ಸುಮಾರು 108 ಕಂಬದ ದೀಪಗಳನ್ನು 300 ಮನೆಗಳಿಗೆ ನೀಡಲಾಗಿತ್ತು. ಭಕ್ತರು ತಮ್ಮ ಮನೆಗಳ ಬಳಿಯೇ ದೀಪಗಳನ್ನು ಬೆಳಗಿಸಿ ಪ್ರಾರ್ಥಿಸಿದರು. ಭಕ್ತರು ತಮ್ಮ ಮನೆಗಳಲ್ಲಿ 18 ದೀಪಗಳನ್ನು ಬೆಳಗುವಂತೆ ಮನವಿ ಮಾಡಲಾಗಿದೆ. ಆ ಮೂಲಕ ವಿಶ್ವಕ್ಕೆ ಕಾಡುತ್ತಿರುವ ಮಹಾಮಾರಿ ಕೊರೊನಾ ತೊಲಗಲಿ ಎಂದು ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಶರಣ್ ತಿಳಿಸಿದರು. ಈ ವ್ಯವಸ್ಥೆಗಳ ಮಧ್ಯೆಯೂ ಕೆಲ ಭಕ್ತರು ಕೊವಿಡ್ ಭೀತಿ ಮರೆತು ದೇಗುಲದ ಬಳಿ ಜಮಾಯಿಸಿದ್ದರು.
ಇನ್ನು ನಗರದ ಅನೇಕ ಮನೆಗಳ ಬಳಿ ಅಯ್ಯಪ್ಪಸ್ವಾಮಿ ದೀಪಗಳನ್ನು ಬೆಳಗಿಸಲಾಯಿತು. ಮಹಿಳೆಯರು , ಮಕ್ಕಳು ಮತ್ತು ಹಿರಿಯ ನಾಗರೀಕರು ಮನೆಯಲ್ಲೇ ದೀಪಗಳನ್ನು ಬೆಳಗಿ ಭಕ್ತಿಯ ನಮನ ಸಲ್ಲಿಸಿದರು. ಅಯ್ಯಪ್ಪಸ್ವಾಮಿ ನಾಮ ಸ್ಮರಣೆ ಜತೆಗೆ ದೀಪ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು. ದೇಗುಲದ ಬಳಿ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಕೊವಿಡ್ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಮನೆ ಮನೆಗಳಲ್ಲಿ ಬೆಳಗಿದ್ದು ಮಾತ್ರ ವಿಶೇಷ.
ವರದಿ: ಬಸವರಾಜ ಮುದನೂರ್, TV9 ಚಿತ್ರದುರ್ಗ
ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ
ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಆರಾಧನೆ
ಇದನ್ನೂ ಓದಿ: ಅಕ್ಷಯ್ ಕುಮಾರ್ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ