ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

ಹಿಂದಿ ಚಿತ್ರರಂಗದ ಯಾವ ನಟರ ಜೊತೆ ಕೆಲಸ ಮಾಡಲು ನೀವು ಇಷ್ಟಪಡುತ್ತೀರಿ ಎಂದು ಸುಕುಮಾರ್​ ಅವರಿಗೆ ಕೇಳಲಾಯಿತು. ಆಗ ಅವರು ಅಕ್ಷಯ್​ ಕುಮಾರ್​ ಹೆಸರನ್ನು ಹೇಳಿದರು.

ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ
ಅಕ್ಷಯ್​ ಕುಮಾರ್, ಸುಕುಮಾರ್​

ಸುಕುಮಾರ್ (Sukumar)​ ಓರ್ವ ಯಶಸ್ವಿ ನಿರ್ದೇಶಕ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಪುಷ್ಪ’ (Pushpa Movie) ಸಿನಿಮಾ ಸೂಪರ್​ ಹಿಟ್​ ಆಗಿದೆ. ವಿಶ್ವಾದ್ಯಂತ 300 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್​ ಮಾಡಿ ಈ ಚಿತ್ರ ಮುನ್ನುಗ್ಗುತ್ತಿದೆ. ಈ ಸಿನಿಮಾದ ಗೆಲುವಿನಿಂದಾಗಿ ಅಲ್ಲು ಅರ್ಜುನ್​ ಅವರ ವೃತ್ತಿಜೀವನಕ್ಕೆ ದೊಡ್ಡ ಬೂಸ್ಟ್​ ಸಿಕ್ಕಂತೆ ಆಗಿದೆ. ಹಾಗಾಗಿ ಸುಕುಮಾರ್​ ಜೊತೆ ಕೆಲಸ ಮಾಡಲು ಬೇರೆಲ್ಲ ಹೀರೋಗಳು ಕೂಡ ಕಾಯುತ್ತಿದ್ದಾರೆ. ಆದರೆ ಸುಕುಮಾರ್​ ಅವರ ಆಯ್ಕೆ ಪಟ್ಟಿಯಲ್ಲಿ ಯಾವೆಲ್ಲ ಹೀರೋಗಳು ಇದ್ದಾರೆ ಎಂಬುದು ಕುತೂಹಲದ ಪ್ರಶ್ನೆ. ಸದ್ಯದಲ್ಲೇ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ನಡುವೆ ಅಕ್ಷಯ್​ ಕುಮಾರ್​ (Akshay Kumar) ಜೊತೆ ಕೆಲಸ ಮಾಡಬೇಕು ಎಂಬ ಆಸೆಯನ್ನು ಸುಕುಮಾರ್​ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ‘ಪುಷ್ಪ 2’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನಟಿಸಬಹುದೇ ಎಂಬ ಕೌತುಕ ನಿರ್ಮಾಣ ಆಗಿದೆ.

‘ಕೆಜಿಎಫ್​’ ಚಿತ್ರತಂಡದ ಕೆಲವು ಫಾರ್ಮುಲಾಗಳನ್ನು ‘ಪುಷ್ಪ’ ಟೀಮ್​ ಫಾಲೋ ಮಾಡಿದೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ‘ಕೆಜಿಎಫ್​: ಚಾಪ್ಟರ್​ 1’ ಸೂಪರ್​ ಹಿಟ್​ ಆದ ಬಳಿಕ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಬಾಲಿವುಡ್​ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಾಗೆಯೇ, ‘ಪುಷ್ಪ 1’ ಗೆಲುವಿನ ಬಳಿಕ ‘ಪುಷ್ಪ 2’ ಸಿನಿಮಾದಲ್ಲಿ ಹಿಂದಿ ನಟ-ನಟಿಯರು ಅಭಿನಯಿಸುವ ಸಾಧ್ಯತೆಯ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಸುಕುಮಾರ್​ ಅವರು ಅಕ್ಷಯ್​ ಕುಮಾರ್​ ಹೆಸರನ್ನು ಪ್ರಸ್ತಾಪಿಸುವ ಮೂಲಕ ನಿರೀಕ್ಷೆ ಮೂಡಿಸಿದ್ದಾರೆ.

ಪಿಂಕ್​ವಿಲ್ಲಾ ನಡೆಸಿದ ಸಂದರ್ಶನದಲ್ಲಿ ಸುಕುಮಾರ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಹಿಂದಿ ಚಿತ್ರರಂಗದ ಯಾವ ನಟರ ಜೊತೆ ಕೆಲಸ ಮಾಡಲು ನೀವು ಇಷ್ಟಪಡುತ್ತೀರಿ ಎಂದು ಕೇಳಲಾಯಿತು. ಆಗ ಅವರು ಅಕ್ಷಯ್​ ಕುಮಾರ್​ ಹೆಸರನ್ನು ಹೇಳಿದರು. ‘ಯಾವ ನಟ ಬೇಕು ಎಂಬುದನ್ನು ಸ್ಕ್ರಿಪ್ಟ್​ ನಿರ್ಧಾರ ಮಾಡುತ್ತದೆ. ಹಾಗಾಗಿ ನಾನು ಬಾಲಿವುಡ್​ನ ಯಾವ ನಟನ ಜೊತೆ ಕೆಲಸ ಮಾಡಬೇಕು ಅಂತ ಹೇಳಲು ಆಗುವುದಿಲ್ಲ. ಆದರೆ ಅಕ್ಷಯ್​ ಕುಮಾರ್​ ಅವರ ಜೊತೆ ನಾನು ಒಮ್ಮೆ ಕೆಲಸ ಮಾಡಬೇಕು’ ಎಂದು ಸುಕುಮಾರ್​ ಹೇಳಿದ್ದಾರೆ. ಇದಕ್ಕೆ ಅಕ್ಷಯ್​ ಕುಮಾರ್​ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಬಹುದು ಎಂದು ಅಭಿಮಾನಿಗಳು ಕಾದಿದ್ದಾರೆ.

ಕಳೆದ ವರ್ಷ ಅಕ್ಷಯ್​ ಕುಮಾರ್​ ನಟಿಸಿದ್ದ ‘ಸೂಯರ್ವಂಶಿ’ ಚಿತ್ರ ಸೂಪರ್​ ಹಿಟ್​ ಆಯಿತು. ದಿನದಿಂದ ದಿನಕ್ಕೆ​ ಅವರ ಸಂಭಾವನೆ ಹೆಚ್ಚುತ್ತಿದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅವರು ಬರೋಬ್ಬರಿ 170 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಹರಡಿದೆ. ಅಕ್ಕಿ ಕೈಯಲ್ಲಿ ಈಗ ಅನೇಕ ಸಿನಿಮಾಗಳಿವೆ.

ಇದನ್ನೂ ಓದಿ:

ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

Click on your DTH Provider to Add TV9 Kannada