ಕುರಿಗಳಿಗೆ ಶೀಫ್ ಪಾಕ್ಸ್ ರೋಗ: ಕುರಿಗಾಹಿಗಳಿಂದ ಚಿತ್ರದುರ್ಗದಲ್ಲೊಂದು ವಿಚಿತ್ರ ಆಚರಣೆ
ದದ್ದು ರೋಗಕ್ಕೆ 'ಕುರಿ ಅಮ್ಮ ರೋಗ' ಎಂದು ಕುರಿಗಾಹಿಗಳು ಕರೆಯುತ್ತಾರೆ. ರೋಗ ನಿವಾರಣೆಗಾಗಿ ಮೃತ ಕುರಿ-ಮೇಕೆಯನ್ನು ಬೇವಿನ ಮರಕ್ಕೆ ತಲೆ ಕೆಳಗಾಗಿ ನೇತು ಹಾಕುವ ಆಚರಣೆ ಮಾಡಿಕೊಂಡು ಬರಲಾಗುತ್ತಿಲ್ಲ.
ಚಿತ್ರದುರ್ಗ: ಬುಡಕಟ್ಟು ಸಮುದಾಯದ ಜನರೇ ಹೆಚ್ಚಾಗಿರುವ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಪ್ರಮುಖ ಕಸುಬಾಗಿದೆ. ಕುರಿ-ಮೇಕೆ, ಹಸು ಸಾಕಣೆ ಮೂಲಕವೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಕುರಿಗಳಿಗೆ ದದ್ದುರೋಗ (Sheep fungus disease) (ಶೀಪ್ ಫಾಕ್ಸ್) ರೋಗ ಬಾಧಿಸುತ್ತಿದೆ. ಕೆಲವೆಡೆ ಕುರಿಗಳು ಸಾವಿಗೀಡಾಗುತ್ತಿದ್ದು ಕುರಿಗಾಹಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮ ಸೇರಿ ವಿವಿಧೆಡೆ ಕುರಿಗಳು ಸಾವಿಗೀಡಾಗಿವೆ. ಒಂದು ವಾರದಿಂಸ ಕುರಿ-ಮೇಕೆಗಳ ಹಿಂಡುಗಳಲ್ಲಿ ರೋಗ ಕಾಣಿಸಿಕೊಂಡಿದೆ. ದದ್ದು ರೋಗಕ್ಕೆ ‘ಕುರಿ ಅಮ್ಮ ರೋಗ’ ಎಂದು ಕುರಿಗಾಹಿಗಳು ಕರೆಯುತ್ತಾರೆ. ರೋಗ ನಿವಾರಣೆಗಾಗಿ ಮೃತ ಕುರಿ-ಮೇಕೆಯನ್ನು ಬೇವಿನ ಮರಕ್ಕೆ ತಲೆ ಕೆಳಗಾಗಿ ನೇತು ಹಾಕುವ ಆಚರಣೆಯೊಂದನ್ನು ಕುರಿಗಾಹಿಗಳು ಈ ಹಿಂದಿನಿಂದ ಆಚರಿಸುತ್ತ ಬಂದಿದ್ದಾರೆ. ‘ಕುರಿ ಅಮ್ಮ ರೋಗ’ ಎಂದು ನಂಬಿರುವ ಕುರಿಗಾಹಿಗಳು ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕುತ್ತಾರೆ. ಈ ಹಿಂದಿನಂತೆ ಬೇವಿನ ಮರಕ್ಕೆ ನೇತು ಹಾಕುವುದೇ ಪರಿಹಾರ ಎಂಬ ನಂಬಿಕೆಯಿಂದ ಪುರಾತನ ಆಚರಣೆಗೆ ಮೊರೆ ಹೋಗಿದ್ದಾರೆ.
ಕುರಿ-ಮೇಕೆಗಳಿಗೂ ರೋಗ ಹರಡುವ ಭೀತಿ
ಕಳೆದ ಒಂದು ವಾರದಿಂದ ಮೊಳಕಾಲ್ಮೂರು ಭಾಗದಲ್ಲಿ ಕುರಿ-ಮೇಕೆಗಳ ಹಿಂಡಿನಲ್ಲಿ ರೋಗ ಕಾಣಿಸಿಕೊಂಡಿದೆ. ಎಲ್ಲಾ ಕುರಿ-ಮೇಕೆಗಳಿಗೂ ರೋಗ ಹರಡುವ ಭೀತಿಗೊಳಗಾದ ಕುರಿಗಾಹಿಗಳು ಕೋನಸಾಗರ ಬಳಿ ಬೇವಿನ ಮರಕ್ಕೆ ಮೃತ ಮೇಕೆಯೊಂದನ್ನು ತಲೆ ಕೆಳಗಾಗಿ ನೇತು ಹಾಕಿದ್ದು ಕಂಡು ಬಂದಿದೆ. ದದ್ದು ರೋಗದ ಪರಿಣಾಮ ಕುರಿ-ಮೇಕೆಯ ದೇಹದ ಎಲ್ಲಾ ಭಾಗದಲ್ಲೂ ದದ್ದುಗಳು ಕಾಣಿಸಿಕೊಳ್ಳುತ್ತವೆ. ಜ್ವರ ಹೆಚ್ಚಾಗಿ ಕುರಿ-ಮೇಕೆಗಳು ಅಸುನೀಗುತ್ತವೆ. ಅಲ್ಲದೆ ಒಂದರಿಂದ ಒಂದಕ್ಕೆ ಈ ರೋಗ ಹರಡುವ ರೋಗ ಇದಾಗಿದೆ.
ಇದನ್ನೂ ಓದಿ: ಕನ್ನಡಿಯಲ್ಲಿ ಹಿಂಬದಿ ಚಕ್ರ ಸಡಿಲಗೊಂಡಿರುವುದನ್ನ ನೋಡಿದ KSRTC ಬಸ್ ಚಾಲಕ, ಮುಂದೇನು ಮಾಡಿದರು ನೋಡಿ!
ಮೌಢ್ಯ ಆಚರಣೆಯ ಮೊರೆ ಹೋಗಬಾರದು: ರೈತ ಶಂಕರಪ್ಪ
ಕುರಿಗಾಹಿಗಳು ಮತ್ತು ರೈತರು ಕುರಿ-ಮೇಕೆಗಳಿಗೆ ರೋಗ ಕಾಣಿಸಿಕೊಂಡಾಗ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಬೇಕು. ಮೌಢ್ಯ ಆಚರಣೆಯ ಮೊರೆ ಹೋಗಬಾರದು. ಕುರಿ-ಮೇಕೆಗಳನ್ನು ಮತ್ತಷ್ಟು ಬಲಿ ಕೊಟ್ಟಂತಾಗುತ್ತದೆ ಎಂದು ಪ್ರಗತಿಪರ ರೈತ ಶಂಕರಪ್ಪ ಹೇಳುತ್ತಾರೆ.
ಶೀಪ್ ಪಾಕ್ಸ್ ರೋಗದ ಬಗ್ಗೆ ಜಾಗೃತಿ: ಡಾ.ರಂಗಸ್ವಾಮಿ
ಕುರಿ-ಮೇಕೆಗಳಿಗೆ ಶೀಪ್ ಪಾಕ್ಸ್ ರೋಗ ಕಂಡು ಬಂದಾಗ ಇಲಾಖೆಯನ್ನು ಸಂಪರ್ಕಿಸಿದರೆ ಆಂಟಿಬಟಿಕ್ ಲಸಿಕೆ ನೀಡಲಾಗುತ್ತದೆ. ಇತರೆ ಕುರಿ-ಮೇಕೆಗೆ ಹರಡದಂತೆ ತಡೆಯಬಹುದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ ಹೇಳಿದ್ದಾರೆ.
ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Thu, 29 December 22