ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು: ಗದಗ ಅವಳಿ ನಗರಗಳಲ್ಲಿ ಸಿಹಿ ತಿನಿಸು ಭರಾಟೆ ಜೋರು
ಕ್ರೈಸ್ತರಲ್ಲಿ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಪಂಗಡಗಳು ಪ್ರಮುಖವಾಗಿದ್ದು, ಪ್ರೊಟೆಸ್ಟೆಂಟ್‌ನಲ್ಲಿ ಇತರೆ ಉಪ ಪಂಗಡಗಳೂ ಇವೆ. ಡಿಸೆಂಬರ್ 25 ರಂದು ಬೆಳಗ್ಗೆ ಆಯಾ ಪಂಗಡಗಳ ಚರ್ಚ್ಗಳ ವಿಶೇಷ ಆರಾಧನೆ ನಡೆಯಲಿದೆ.

ಗದಗ : ರಾತ್ರಿ ಕರ್ಫ್ಯೂ ಹಾಗೂ ಕೊರೊನಾ ಸೋಂಕಿನ ಭೀತಿಯ ನಡುವೆಯೂ ಅವಳಿ ನಗರಗಳಾದ ಗದಗ–ಬೆಟಗೇರಿಯಲ್ಲಿ ಕ್ರೈಸ್ತರು ಕ್ರಿಸ್ಮಸ್ ಸರಳ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಹೌದು ಗದಗ–ಬೆಟಗೇರಿ ಅವಳಿ ನಗರದ ಚರ್ಚ್ ಆಫ್ ಬ್ಲೆಸ್ಸಿಂಗ್, ಸಂತ ಇಗ್ನೇಶಿಸ್ ಚರ್ಚ್, ಸಿಎಸ್‌ಐ ಬಾಶಲ್ ಮಿಷನ್, ಎಸ್‌ಪಿಜಿ, ಇಎಸ್‌ಐ, ಸಾಲೋಮಿನಿಸ್ಟ್ರಿ, ಚರ್ಚ್ ಆಫ್ ಗಾಡ್, ಹೆಬ್ರನ್ ಸೇರಿ ಜಿಲ್ಲೆಯ ನರಗುಂದ, ಗಜೇಂದ್ರಗಢ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿಯ ಎಲ್ಲಾ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಅದೇ ಮಾದರಿಯಲ್ಲಿ ಜನರು ತಮ್ಮ ಮನೆಗಳಲ್ಲಿಯೂ ಕ್ರಿಸ್ಮಸ್ ಟ್ರೀ ನಿರ್ಮಿಸಿ ಅವುಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದಾರೆ.
ಕ್ರಿಶ್ಚಿಯನ್ನರು ಹೆಚ್ಚಿರುವ ಬೆಟಗೇರಿ, ಹೆಲ್ತ್ ಕ್ಯಾಂಪ್, ವೆಲ್‌ಫೇರ್ ಟೌನ್‌ಶಿಪ್, ಎಸ್.ಎಂ. ಕೃಷ್ಣಾ ನಗರ, ಕ್ರಿಶ್ಚಿಯನ್ನರ ಕಾಲೊನಿಯಲ್ಲಿ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದ್ದು, ಚರ್ಚ್ಗಳಲ್ಲಿ ಗೋದಲಿಗಳನ್ನು ನಿರ್ಮಿಸಲಾಗಿದೆ. ಮನೆ ಎದುರು ಬಗೆ ಬಗೆಯ ಸ್ಟಾರ್ (ಆಕಾಶಬುಟ್ಟಿ) ಗಳನ್ನು ತೂಗು ಹಾಕಲಾಗಿದ್ದು, ಹಬ್ಬಕ್ಕೆ ಹೊಸ ಬಟ್ಟೆ, ಅಲಂಕಾರಿಕ ವಸ್ತುಗಳು, ಕೇಕ್ ಖರೀದಿಯೂ ಜೋರಾಗಿದೆ. ಅಲ್ಲದೆ, ಮನೆಗಳಲ್ಲಿ ಸಿಹಿ ತಿನಿಸುಗಳ ತಯಾರಿಕೆಯೂ ಸಡಗರದಿಂದ ನಡೆಯುತ್ತಿದೆ.
ವಿಶೇಷ ಆರಾಧನೆ: ಕ್ರೈಸ್ತರಲ್ಲಿ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಪಂಗಡಗಳು ಪ್ರಮುಖವಾಗಿದ್ದು, ಪ್ರೊಟೆಸ್ಟೆಂಟ್‌ನಲ್ಲಿ ಇತರೆ ಉಪ ಪಂಗಡಗಳೂ ಇವೆ. ಡಿಸೆಂಬರ್ 25 ರಂದು ಬೆಳಗ್ಗೆ ಆಯಾ ಪಂಗಡಗಳ ಚರ್ಚ್ಗಳ ವಿಶೇಷ ಆರಾಧನೆ ನಡೆಯಲಿದೆ.

ಗದಗ ಚರ್ಚ್ನಲ್ಲಿ ಕ್ರಿಸ್ಮಸ್
ಸಿಹಿ ತಿನಿಸುಗಳ ತಯಾರಿಕೆ: ಕ್ರಿಸ್‌ಮಸ್ ಹಬ್ಬಕ್ಕಾಗಿ ಸಿಹಿ ತಿನಿಸುಗಳ ತಯಾರಿಕೆ ನಡೆಯುತ್ತಿದ್ದು, ಮನೆಗಳಿಗೆ ಸಂಬಂಧಿಗಳು, ಸ್ನೇಹಿತರು ಬಂದಿದ್ದಾರೆ. ಹಬ್ಬದ ಸಡಗರ ಮನೆ ಮಾಡಿದ್ದು, ರೋಜ್ ಕುಕ್ಸ್, ಅವಲಕ್ಕಿ, ಬೇಸನ್ ಲಾಡು, ಕರ್ಜಿಕಾಯಿ, ಚಕ್ಕುಲಿ ಸೇರಿದಂತೆ ವಿವಿಧ ಬಗೆಯ ಕೇಕ್‌ಗಳನ್ನು ತಯಾರಿಸಲಾಗುತ್ತಿದೆ. ನಗರದ ಬೇಕರಿಗಳಲ್ಲಿ ವಿವಿಧ ಬಗೆಯ ಕೇಕ್‌ಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಸ್ಟೇಷನ್ ರಸ್ತೆ, ಟಾಂಗಾ ಕೂಟ, ಬಸವೇಶ್ವರ ವೃತ್ತ, ಕೇಕ್ ಕಾರ್ನರ್‌ಗಳಲ್ಲಿ ಕ್ರಿಸ್‌ಮಸ್‌ಗಾಗಿ ರುಚಿ ರುಚಿಯಾದ ಕೇಕ್ ಮತ್ತು ಸಿಹಿ ತಿನಿಸು ತಯಾರಿಸಲಾಗಿದೆ.

ಕ್ರಿಸ್ಮಸ್ ಹಬ್ಬದ ತಯಾರಿ
ಈ ಬಾರಿಯ ಕ್ರಿಸ್‌ಮಸ್ ಬಹಳ ವಿಶೇಷವಾದದ್ದು. ಆದರೆ ಈಗ ಕೊರೊನಾ ಸೋಂಕು ಎಲ್ಲೆಡೆ ಆವರಿಸಿದ್ದು, ಈ ವರ್ಷ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಹಬ್ಬ ಆಚರಿಸುತ್ತಿದ್ದೇವೆ. ಹಿಂದಿನಂತೆ ಸಂಭ್ರಮ ಇಲ್ಲ. ಆತಂಕದಲ್ಲೇ ಹಬ್ಬ ಆಚರಿಸಬೇಕಾಗಿದೆ. ಡಿಸೆಂಬರ್18ರಿಂದ 21ರವರೆಗೆ ಮನೆ ಮನೆಗೆ ತೆರಳಿ ಕ್ಯಾರೆಲ್ ಗೀತೆಗಳ ಮೂಲಕ ಯೇಸುವಿನ ಸಂದೇಶ ಸಾರಲಾಯಿತು ಎಂದು ಬೆಟಗೇರಿ ನಿವಾಸಿ ಎನ್.ಜಸ್ಟಿನ್ ಹೇಳಿದ್ದಾರೆ.



