ಶಿವಮೊಗ್ಗ, ಸೆಪ್ಟೆಂಬರ್ 08: ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ (Clash) ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಅರಬಿಳಚಿ ಕ್ಯಾಂಪ್‌ನಲ್ಲಿ ಘಟನೆ ನಡೆದಿತ್ತು. ಹೊಳೆಹೊನ್ನೊರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಣಪತಿ ವಿಸರ್ಜನೆ ವೇಳೆ ಡೊಳ್ಳು ಭಾರಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಎರಡು ಗುಂಪುಗಳ ಗಲಾಟೆ ವಿರುದ್ಧ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮುಂಜಾಗ್ರತೆಗೆ ಅರಬಿಳಚಿ ಕ್ಯಾಂಪ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಎರಡು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ರಾಯಚೂರು: ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಿದ್ದು, ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಮೂರು ಮೈಲ್ ಕ್ಯಾಂಪ್‌ನಲ್ಲಿ ನಡೆದಿದೆ. ವೀರಬಸಪ್ಪ (60) ಮೃತ ವ್ಯಕ್ತಿ.
ಇದನ್ನೂ ಓದಿ: ಕಳೆದ ವರ್ಷದ ಗಲಾಟೆಯಿಂದ ಪಾಠ: ಈ ಬಾರಿ ಶಿವಮೊಗ್ಗದಲ್ಲಿ ಪೊಲೀಸರು ಹೈಅಲರ್ಟ್
ನಿನ್ನೆ ಏರಿಯಾದಲ್ಲಿ ಕೂರಿಸಲಾಗಿದ್ದ ಗಣೇಶನ ವಿಸರ್ಜನೆ ವೇಳೆ ಗಲಾಟೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಬಿಡಿಸಲು ವೀರಬಸಪ್ಪ ಹೋಗಿದ್ದಾರೆ. ಆ ವೇಳೆ ವೀರಬಸಪ್ಪ ಕೆನ್ನೆಗೆ ಮಹೇಶ್ ಎಂಬಾತ ಹೊಡೆದಿದ್ದಾರೆ. ಈ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತನ ಕುಟುಂಬಸ್ಥರಿಂದ ಕೊಲೆ ಆರೋಪದಡಿ ದೂರು ನೀಡಲಾಗಿದ್ದು, ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್, ಪರಶುರಾಮ ಹಾಗೂ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ: ಬಾರ್ವೊಂದರಲ್ಲಿ ಸಪ್ಲೈಯರ್ ಹಾಗೂ ಓರ್ವನ ಮಧ್ಯೆ ಗಲಾಟೆ ಮಾಡಿ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಬಳಿಯ ಬಾರ್ ವೊಂದರಲ್ಲಿ ನಡೆದಿದೆ. ಬಾರ್ ಮ್ಯಾನೇಜರ್ ಹೀರಾಮನಿ ಜೋರಾಪುರ ಮೇಲೆ ಕುಡುಗೋಲಿನಿಂದ ವ್ಯಕ್ತಿಯೊಬ್ಬನಿಂದ ಹಲ್ಲೆ ಮಾಡಲಾಗಿದೆ. ಮುತ್ಯಾನಟ್ಟಿ ಗ್ರಾಮದ ಸುನೀಲ್ ಕರಿಕಟ್ಟಿ ಎಂಬಾತನ ಮೇಲೆಯೂ ಮ್ಯಾನೇಜರ್ ಪ್ರತಿ ಹಲ್ಲೆ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್
ಹಲ್ಲೆಗೊಳಗಾದ ಬಾರ್ ಮ್ಯಾನೇಜರ್ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಹಲ್ಲೆ ಮಾಡಿದ ಸುನೀಲ್ ಎಂಬ ವ್ಯಕ್ತಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಾಲೀಕರಾದವರು ಅವರ ಕೆಳಗಿನ ಹುದ್ದೆಯಲ್ಲಿರುವವರಿಗೆ ಹೇಳಬೇಕು, ಹೀಗೆ ಮಾಡಿದರೆ ಅವರನ್ನು ನಾನು ಬಿಡಲ್ಲ ಎಂದು ಸುನೀಲ್ ಹೇಳಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.