ಬೆಂಗಳೂರು: ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ನಮಗೆಲ್ಲರಿಗೂ ಆದರ್ಶ. ಸಾತ್ವಿಕತೆ, ವೈಚಾರಿಕತೆ ತುಂಬಿದ ಅಪರೂಪದ ನಾಯಕ ಅವರು. ಗುರುಗಳಿಲ್ಲದೇ ನಾಗರಿಕ ಸಮಾಜ ಕಟ್ಟುವುದಕ್ಕೆ ಆಗಲ್ಲ. ದೇವರ ಬಳಿಕ ಗುರುವೇ, ಗುರು ಇಲ್ಲದೇ ದೇವರೂ ಸಿಗಲ್ಲ ಎಂದು ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಮಾತನಾಡಿದ್ದಾರೆ. ಭಕ್ತಿ ಅಂದ್ರೆ ಉತ್ಕೃಷ್ಟ ಪ್ರೀತಿ, ಅನ್ಕಂಡಿಷನಲ್ ಲವ್. ಆ ಕಾಲದಲ್ಲಿ ಶಿಕ್ಷಣಕ್ಕೆ ಋಷಿಗಳ ಮೊರೆ ಹೋಗುತ್ತಿದ್ರು. ಈಗ ಜ್ಞಾನ ಹೋಗಿ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ಬಂದಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಈ ಬದಲಾವಣೆ ಆಗ್ತಿದೆ. ಈ ವೇಗ ಹಿಡಿದುಕೊಳ್ಳುವರು ಯಶಸ್ಸು ಕಾಣುತ್ತಾರೆ. ವೇಗ ಹಿಡಿಯದವರು ಹಿಂದೆ ಉಳಿದುಬಿಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈಗಿನ ಶಿಕ್ಷಣದ ಮತ್ತು ಜಗತ್ತಿನ ಈ ವೇಗವನ್ನು ಶಿಕ್ಷಕರು ಹಿಡಿದುಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಈಗ ಜ್ಞಾನ ನೀಡುವುದಕ್ಕೆ ಸಾಧ್ಯ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಈ ನೀತಿ ಜಾರಿಗೆ ಬಂದಿದೆ. ಹೊಸ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆ ಆಗಿದೆ. ಶಿಕ್ಷಕರು, ಸರ್ಕಾರಿ ಸಂಸ್ಥೆಗಳೂ ಇದಕ್ಕೆ ಸಿದ್ಧರಾಗಬೇಕು. ಹೊಸ ನೀತಿ ಬಂದಾಗ ಪರ- ವಿರೋಧ ಇರೋದು ಸಹಜ. ಇಂದಿನ ಸವಾಲು ಎದುರಿಸಲು ಮಕ್ಕಳನ್ನ ಸಜ್ಜುಗೊಳಿಸಬೇಕು. ದೇಶ ಬೆಳೆಸುವ ಶಕ್ತಿ ನಮ್ಮ ಗುರುಗಳಲ್ಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ನೇಮಕಾತಿ ಬಹಳ ದಿನಗಳಿಂದ ಉಳಿದುಕೊಂಡಿದೆ. 5 ಸಾವಿರ ಶಿಕ್ಷಕರ ನೇಮಕಕ್ಕೆ ಇಂದು ತೀರ್ಮಾನಿಸಲಾಗಿದೆ. ಈ ವರ್ಷದೊಳಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಶಿಕ್ಷಕರ ದಿನಾಚರಣೆಯಲ್ಲಿ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ನನಗೆ ಗಣಿತ ಕಲಿಸಿದ ಗುರುಗಳನ್ನ ನಾನು ಇಂದಿಗೂ ಮರೆತಿಲ್ಲ ಎಂದು ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಆದಷ್ಟು ಬೇಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ಈ ಕುರಿತು ಸಿಎಂ ಬೊಮ್ಮಾಯಿ ಕೂಡ ಆಸಕ್ತಿ ತೋರಿದ್ದಾರೆ. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಘಾಟಿಸುವ ಆಸಕ್ತಿ ತೋರಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ ಎಂದು ಬೆಂಗಳೂರಲ್ಲಿ ಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲೇ ಜಾರಿಗೆ ತರುವ ಪ್ರಯತ್ನ ಮಾಡಲಿದ್ದೇವೆ. ಆಡಳಿತ ವಿಭಾಗದಲ್ಲಿ ಒಂದಷ್ಟು ಸಮಸ್ಯೆಗಳು ಬರಬಹುದು. ರಾಷ್ಟ್ರದ ಹಿತಕ್ಕೆ ಎಲ್ಲರೂ ಸಹಿಸಿಕೊಂಡು ಕೆಲಸ ಮಾಡ್ಬೇಕು ಎಂದು ಬಿ.ಸಿ. ನಾಗೇಶ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಶಿಕ್ಷಕರಾಗಿದ್ದ ನಮ್ಮ ತಂದೆ ನನಗೆ ಹೊಡೆಯುತ್ತಿದ್ದರು. ತಂದೆ ಹೊಡೆದಾಗ ನಾನು ತಾಯಿ ಮೊರೆ ಹೋಗುತ್ತಿದ್ದೆ. ಅಮ್ಮ ಸಮಾಧಾನದಿಂದ ಮನೆಪಾಠ ಹೇಳಿ ಕೊಡುತ್ತಿದ್ದರು ಎಂದು ಶಿಕ್ಷಕರ ದಿನಾಚರಣೆಯಲ್ಲಿ ಬಾಲ್ಯದ ದಿನಗಳನ್ನು ಸುಧಾಕರ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ: ಡಿಕೆ ಶಿವಕುಮಾರ್ಗೆ ಅಶ್ವತ್ಥ್ ನಾರಾಯಣ ತಿರುಗೇಟು
ಇದನ್ನೂ ಓದಿ: Teachers Day: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ