ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶನ ಮಾಡುವವರು. ನಮಗೆ ಸ್ಫೂರ್ತಿ ತುಂಬಿ ನಮ್ಮನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು. ಶಿಕ್ಷಕರು ನಮ್ಮ ಜೀವನದ ಭದ್ರ ಬುನಾದಿ ಹಾಕಿಕೊಡುವವರು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಮಾತೊಂದಿದೆ. ಆ ಬಳಿಕದ ಸ್ಥಾನ ಶಾಲೆಯಲ್ಲಿ ಪಾಠ ಕಲಿಸುವ ಗುರುವಿಗೆ ಸಲ್ಲುತ್ತದೆ. ಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ. ಇದು ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಅವರು ದೇಶದ ಮೊದಲ ಉಪ ರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯೂ ಹೌದು. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ.