ಮಾಸಾಶನ ಹೆಚ್ಚಳ: ಮೊದಲ ಅಧಿಕೃತ ಆದೇಶ ಹೊರಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
Basavaraj Bommai: ದಿವ್ಯಾಂಗರ ವೇತನ ಕೂಡ 600ರಿಂದ 800 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರಿಂದ 3 ಲಕ್ಷ 66 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ನನ್ನ ಆಡಳಿತ ಜನಪರ ಇರುವ ಸ್ಟ್ಯಾಂಪ್ ಆಗುತ್ತೆ ಎಂದು ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬಸವರಾಜ ಬೊಮ್ಮಾಯಿ (Basavaraj Bommai) ಮೊದಲ ಅಧಿಕೃತ ಆದೇಶ ಪ್ರಕಟಿಸಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುತ್ತಿರುವ ಮಾಸಾಶನಗಳನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನೂತನ ಮುಖ್ಯಮಂತ್ರಿಯಾಗಿ ಜುಲೈ 28ರಂದು ಪ್ರಮಾಣವಚನ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ಜನಪರ ಆಡಳಿತದ ಭರವಸೆ ನೀಡಿದ್ದರು. ರೈತ ಮಕ್ಕಳಿಗೆ ಶಿಕ್ಷಣ ವೇತನ ಸಹಿತ ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವಿಧವಾ ವೇತನದ ಮೊತ್ತವನ್ನು ಏರಿಕೆ ಮಾಡುವುದಾಗಿ ಘೋಷಿಸಿದ್ದರು. ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ ಸದ್ಯ 1000 ರೂಪಾಯಿ ಇದೆ. ಅದನ್ನು 1200 ರೂಪಾಯಿಗೆ ಏರಿಕೆ ಮಾಡಲಾಗುವುದು. ಹಾಗೂ ವಿಧವಾ ವೇತನ ಮಾಸಿಕ 600 ರೂಪಾಯಿ ಇತ್ತು. ಅದನ್ನು 800 ರೂಪಾಯಿಗೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇಂದು ಅವರು ಈ ಘೋಷಣೆಗಳನ್ನು ಈಡೇರಿಸುವಂತೆ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯ ಹಣ ಮತ್ತಷ್ಟು ಹೆಚ್ಚಳ ಮಾಡಲಾಗಿದ್ದು, 1,000 ರೂಪಾಯಿಯಿಂದ 1,200 ರೂಪಾಯಿಗೆ ಹೆಚ್ಚಳ ಆಗಿದೆ. ವಿಧವಾ ವೇತನ, ವಿಶೇಷ ಚೇತನರ ಮಾಸಾಶನ ಹೆಚ್ಚಳವಾಗಿದೆ. ಸಂಧ್ಯಾ ಸುರಕ್ಷಾ ಯೋಜನೆ ವೆಚ್ಚ 863.52 ಲಕ್ಷ ಹೆಚ್ಚುವರಿ ಆಗಲಿದೆ. ವಿಧವಾ ವೇತನ 600ರಿಂದ 800ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರಂತೆ, 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಮತ್ತು 13.25 ಲಕ್ಷ ವಿಧವೆಯರಿಗೆ ಈ ಯೋಜನೆ ಅನುಕೂಲವಾಗಲಿದೆ.
ದಿವ್ಯಾಂಗರ ವೇತನ ಕೂಡ 600ರಿಂದ 800 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರಿಂದ 3 ಲಕ್ಷ 66 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ನನ್ನ ಆಡಳಿತ ಜನಪರ ಇರುವ ಸ್ಟ್ಯಾಂಪ್ ಆಗುತ್ತೆ ಎಂದು ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(CM Basavaraj Bommai issued the first official order of Increase of Monthly pension schemes)