ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು

| Updated By: ganapathi bhat

Updated on: Aug 04, 2021 | 6:38 PM

Basavaraj Bommai on New Cabinet: ಕೊವಿಡ್ ಟಾಸ್ಕ್​ಫೋರ್ಸ್​ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್​ಫೋರ್ಸ್​ ರಚನೆ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕ ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 4) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.  ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಕೊವಿಡ್ ಟಾಸ್ಕ್​ಫೋರ್ಸ್​ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್​ಫೋರ್ಸ್​ ರಚನೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕೆಂದು ಆಗ್ರಹಿಸಿಲ್ಲ. ಇಂದಿನ ಸಂಪುಟ ಸಭೆಯಲ್ಲಿ ನೂತನ ಸಚಿವರು ಒತ್ತಾಯಿಸಿಲ್ಲ. ಸಂಪುಟ ರಚನೆಗೆ ಹಿಂದೆ 10-15 ದಿನ ಅಥವಾ ತಿಂಗಳು ಹಿಡಿಯುತ್ತಿತ್ತು. ಆದರೆ, ಈ ಬಾರಿ 3 ದಿನದಲ್ಲಿ ಸಚಿವರ ಪಟ್ಟಿ ಫೈನಲ್ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಖಾತೆ ಹಂಚಿಕೆಗೆ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ನೂತನ ಸಚಿವರಿಗೆ ನಾನೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಯಾರೊಬ್ಬರೂ ಮೊದಲ ಖಾತೆಯಲ್ಲಿ ಮುಂದುವರಿಸಿ ಅಂದಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇವೆ ಅಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್​ಟಿಪಿಎಸ್​​ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್​ಟಿ ಸೆಕ್ರೆಟರಿಯೇಟ್​ ರಚನೆ ತೀರ್ಮಾನ ಮಾಡುತ್ತೇವೆ. ಎಸ್​ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್​ ರಚನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್​.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನಿಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ; ಸಚಿವರ ಜಾತಿವಾರು, ಪ್ರದೇಶವಾರು ಲೆಕ್ಕಾಚಾರ, ಸಮಗ್ರ ವರದಿ ಹೀಗಿದೆ

(CM Basavaraj Bommai on Karnataka Cabinet Ministers work Covid19 Flood Relief)

Published On - 6:10 pm, Wed, 4 August 21