ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ

ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ
ಧರ್ಮಸ್ಥಳ

Dakshina Kannada Covid Guidelines: ಕಟೀಲಿನ ದುರ್ಗಾ ಪರಮೇಶ್ವರಿ,ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವೀಕೆಂಡ್​ನಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಉಳಿದ ದಿನಗಳಲ್ಲಿಯೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 

TV9kannada Web Team

| Edited By: Sushma Chakre

Aug 04, 2021 | 7:02 PM

ಮಂಗಳೂರು: ಕರ್ನಾಟಕದಲ್ಲಿ ಕೊವಿಡ್ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ನೆರೆಯ ಕೇರಳರಾಜ್ಯದಲ್ಲಿ ಕೊರೊನಾ ಕೇಸುಗಳು ಹೆಚ್ಚಾಗಿರುವುದರಿಂದ ಗಡಿ ಭಾಗದಲ್ಲಿ ಭಾರೀ ಬಂದೋಬಸ್ತ್ ವಹಿಸಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಕೇರಳದಿಂದ ಪ್ರಯಾಣಿಸುವವರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹಾಗೇ, ಕಟೀಲಿನ ದುರ್ಗಾ ಪರಮೇಶ್ವರಿ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿಯೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಮೂರು ದೇವಸ್ಥಾನಗಳಿಗೆ ವೀಕೆಂಡ್​ನಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಉಳಿದ ದಿನಗಳಲ್ಲಿಯೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಕೇಸುಗಳು ಹೆಚ್ಚಾಗಿದೆ, ಹೀಗಾಗಿ, ಆ ಭಾಗದಿಂದ ಮಂಗಳೂರು, ಸುಳ್ಯ ಮುಂತಾದ ಪ್ರದೇಶಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಗಡಿ ಭಾಗದಲ್ಲಿ ಕೇರಳದ ಜನರ ಓಡಾಟ ಹೆಚ್ಚಾದರೆ ದಕ್ಷಿಣ ಕನ್ನಡದಲ್ಲೂ ಕೊವಿಡ್ ಕೇಸುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೇವಲ ಕೇರಳ- ಕರ್ನಾಟಕದ ಗಡಿಭಾಗದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳ ಭಕ್ತರಿಗೂ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕಟೀಲು, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಧಿಕ ಪ್ರಮಾಣದ ಭಕ್ತರು ಆಗಮಿಸುವುದರಿಂದ 3ನೇ ಕೊವಿಡ್ ಅಲೆಯ ಸಾಧ್ಯತೆಯನ್ನು ನಿಯಂತ್ರಿಸುವ ಸಲುವಾಗಿ ಈ ಕೆಳಗಿನ ನಿರ್ಬಂಧಗಳನ್ನು ವಿಧಿಸಲಾಗಿದೆ.

1. ನಾಳೆಯಿಂದ ಅಂದರೆ ಆಗಸ್ಟ್ 5ರಿಂದ ಆಗಸ್ಟ್ 15ರವರೆಗೆ ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ.

2. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಈ ಮೂರು ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಸತಿ ಗೃಹಗಳಲ್ಲಿ ಭಕ್ತರು ಉಳಿದುಕೊಳ್ಳಲು ಕೂಡ ಅವಕಾಶ ಇರುವುದಿಲ್ಲ.

3. ಶನಿವಾರ ಮತ್ತು ಭಾನುವಾರ ಎಲ್ಲ ವಿಶೇಷ ಪೂಜೆಗಳನ್ನು ನಿರ್ಬಂಧಿಸಲಾಗಿದ್ದು, ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ.

4. ವಾರಾಂತ್ಯವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಮೂರು ದೇವಾಲಯಗಳ ವಸತಿ ಗೃಹಗಳಲ್ಲಿ ಉಳಿದುಕೊಳ್ಳುವವರು 72 ಗಂಟೆಯೊಳಗೆ ಆರ್​ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿಯನ್ನು ನೀಡಬೇಕು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಅವಧಿ ವಿಸ್ತರಣೆ; ದಾವಣಗೆರೆಯಲ್ಲಿ ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ

(Dharmasthala, Kukke Subrahmanya, Kateel Temples Entry Banned During Weekend New Covid-19 Guidelines)

Follow us on

Related Stories

Most Read Stories

Click on your DTH Provider to Add TV9 Kannada