ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ಬಿಡಬೇಡಿ: ಸಿಎಂ ಯಡಿಯೂರಪ್ಪ

ಈ ವೇಳೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ತುಮಕೂರು ಜಿಲ್ಲೆಯಲ್ಲಿ 28 ಸಾವಿರ ಸಕ್ರಿಯ ಕೊವಿಡ್ ಪ್ರಕರಣಗಳು ಇವೆ. ಆದರೆ, ಆಕ್ಸಿಜನ್, ಮಾತ್ರೆ ಇಲ್ಲ, ರೆಮ್‌ಡಿಸಿವಿರ್‌ ಇಲ್ಲ. ಹೆಚ್ಚುವರಿಯಾಗಿ ವ್ಯಾಕ್ಸಿನ್ ನೀಡಿ ಇಲ್ಲದಿದ್ರೆ ಕಷ್ಟವಾಗುತ್ತದೆ. ಮೊದಲು ನಿಮ್ಮ ಜತೆಯಲ್ಲಿ ಇರುವವರಿಗೆ ಕೆಲಸ ಮಾಡಲು ಹೇಳಿ ಸರ್’ ಎಂದು ಸಿಎಂ ಯಡಿಯೂರಪ್ಪಗೆ ಖಾರವಾಗಿಯೇ ಹೇಳಿದರು.

ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ಬಿಡಬೇಡಿ: ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕೊವಿಡ್ ಕೇರ್ ಸೆಂಟರ್​ಗೆ ಆದ್ಯತೆ ನೀಡಿ. ಹೋಮ್‌ ಐಸೋಲೇಷನ್ ಬಗ್ಗೆ ಎಚ್ಚರಿಕೆ ವಹಿಸಿ. ಮೆಡಿಕಲ್ ಕಿಟ್ ಕೊರತೆಯಾದರೆ ಸ್ಥಳೀಯವಾಗಿ ಖರೀದಿ ಮಾಡಿ. ಆಕ್ಸಿಜನ್ ಪೂರೈಕೆಗೆ ಪಕ್ಕದ ಜಿಲ್ಲೆಗಳ ಜತೆ ಸಮನ್ವಯತೆ ಕಾಪಾಡಿಕೊಳ್ಳಿ. ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ಬಿಡಬೇಡಿ, ಸಕಲ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳ ಜತೆಗಿನ ವರ್ಚುವಲ್ ಸಭೆಯಲ್ಲಿ ನಿರ್ದೇಶನ ನೀಡಿದರು.

ಎಲ್ಲಾ ವಿಭಾಗ ಮಟ್ಟದಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರಿಗೆ ಆದ್ಯತೆ ಮೇರೆಗೆ ಆಕ್ಸಿಜನ್ ಜನರೇಟರ್ ಒದಗಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವರು ವಾರಕ್ಕೆ ಎರಡು ಬಾರಿ ಉಸ್ತುವಾರಿ ಸಚಿವರ ಜೊತೆ ಚರ್ಚಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಜಾಸ್ತಿಯಾಗುತ್ತಿದೆ.  ಲಾಕ್ ಡೌನ್ ಬಗ್ಗೆ ಎರಡು ಮೂರು ದಿನಗಳ ನಂತರ ಎಷ್ಟು ದಿನ ಮುಂದುವರಿಸಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ ತಿಳಿಸಿದರು.

ಕೊವಿಡ್ ಸೋಂಕಿತರ ಹೆಚ್ಚಳವಾಗುತ್ತಿರುವ ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ತುಮಕೂರು, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದರು. ಲಾಕ್​ಡೌನ್ ಕುರಿತು ಸಭೆಯ ಆರಂಭದಲ್ಲಿ ಸಲಹೆ ಕೇಳಿದ್ದ ಸಿಎಂ ಯಡಿಯೂರಪ್ಪ ನಂತರ ಲಾಕ್​ಡೌನ್ ಕುರಿತು ಯಾವುದೇ ತೀರ್ಮಾನವನ್ನೂ ಕೈಗೊಳ್ಳದೇ ಸಭೆಯನ್ನು ಮೊಟಕುಗೊಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲಾಧಿಕಾರಿಗಳ ಜತೆ ವಾರಕ್ಕೆ ಎರಡು ಬಾರಿ ಚರ್ಚೆ ನಡೆಸಲು ಸೂಚನೆ ನೀಡಿದರು.

ಸಚಿವ ಮಾಧುಸ್ವಾಮಿ ಗರಂ
ಈ ವೇಳೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ತುಮಕೂರು ಜಿಲ್ಲೆಯಲ್ಲಿ 28 ಸಾವಿರ ಸಕ್ರಿಯ ಕೊವಿಡ್ ಪ್ರಕರಣಗಳು ಇವೆ. ಆದರೆ, ಆಕ್ಸಿಜನ್, ಮಾತ್ರೆ ಇಲ್ಲ, ರೆಮ್‌ಡಿಸಿವಿರ್‌ ಇಲ್ಲ. ಹೆಚ್ಚುವರಿಯಾಗಿ ವ್ಯಾಕ್ಸಿನ್ ನೀಡಿ ಇಲ್ಲದಿದ್ರೆ ಕಷ್ಟವಾಗುತ್ತದೆ. ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರಿಗಿಬ್ಬರಿಗೂ ಈ ಬಗ್ಗೆ ಹೇಳಿದ್ದೇನೆ. ಆದರೂ ಅಗತ್ಯ ವಸ್ತುಗಳು ದೊರೆಯುತ್ತಿಲ್ಲ. ಮೊದಲು ನಿಮ್ಮ ಜತೆಯಲ್ಲಿ ಇರುವವರಿಗೆ ಕೆಲಸ ಮಾಡಲು ಹೇಳಿ ಸರ್’ ಎಂದು ಸಿಎಂ ಯಡಿಯೂರಪ್ಪಗೆ ಖಾರವಾಗಿಯೇ ಹೇಳಿದರು.

ಜಿಲ್ಲಾಧಿಕಾರಿಗಳಿಗೆ ಅವಕಾಶ
ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಇರುವ ಸಮಯಾವಕಾಶವನ್ನು ಮತ್ತಷ್ಟು ಕಡಿತಗೊಳಿಸುವ ವಿಚಾರವನ್ನು ನಿಮ್ಮ ನಿರ್ಧಾರದಂತೆ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಬಳಿ ಮಾತನಾಡುವ ವೇಳೆ ಸಿಎಂ ಯಡಿಯೂರಪ್ಪ ಪ್ರಸ್ತಾಪಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ ಸಮಸ್ಯೆಯಿಂದ 36 ವೆಂಟಿಲೇಟರ್ ಬಳಸುತ್ತಿಲ್ಲ. ವೆಂಟಿಲೇಟರ್ ಇಲ್ಲದೆ ಸೋಂಕಿತರಿಗೆ ಸಮಸ್ಯೆ ಆಗುತ್ತಿದೆ. 36 ವೆಂಟಿಲೇಟರ್ ಬಳಸಿಕೊಳ್ಳಲು‌ ಹೆಚ್ಚಿನ ಆಕ್ಸಿಜನ್ ಬೇಕು. ಮೆಡಿಕಲ್ ಕಾಲೇಜಿಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಿ. ನಮ್ಮ ಜಿಲ್ಲಾಸ್ಪತ್ರೆಗೆ 150 ಸಿಲಿಂಡರ್ ಬ್ಯಾಕ್ ಅಪ್ ಬೇಕು ಎಂದು ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ವೇಳೆ ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಸಿಎಂ ಯಡಿಯೂರಪ್ಪ ಗರಂ
“ರಾಜ್ಯದಲ್ಲಿ ಇಷ್ಟೊಂದು ಕೊವಿಡ್ ಕೇಸ್ ಬರ್ತಿದೆ, ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ದಿನೇದಿನೆ ಕೊರೊನಾ ಕೇಸ್‌ಗಳು ಹೆಚ್ಚುತ್ತಲೇ ಇವೆ. ನಾಳೆ ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಇದೆ. ಹೀಗಾದ್ರೆ ನಾಳೆ ಪ್ರಧಾನಿಗೆ ನೀವು ಏನು ಉತ್ತರ ನೀಡ್ತೀರಿ?” ಎಂದು ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜತೆಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಲಾಕ್​ಡೌನ್​ನಿಂದ ಏನಾದರೂ ಅನುಕೂಲವಾಗಿದೆಯಾ? ಎಂದು ಸಹ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜನರು ಕೊವಿಡ್ ನಿಯಮ ಪಾಲಿಸುತ್ತಿದ್ದಾರಾ? ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿದ್ದರಿಂದ ಕೊವಿಡ್ ತಡೆಯಲು ಸಮಸ್ಯೆ ಉಂಟಾಗಿದೆಯಾ? ನಿಮ್ಮ ಸಮಸ್ಯೆ ಏನೆಂದು ವಿವರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಹಾಕಿದ್ದಾರೆ.

ಸರ್ಕಾರದ ನಿರೀಕ್ಷಿತ ಮಟ್ಟಕ್ಕೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದು ಸಹ ಸಿಎಂ ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಸಚಿವ ಅರವಿಂದ ಲಿಂಬಾವಳಿ, ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಕೆ.ಗೋಪಾಲಯ್ಯ, ಸಿಎಸ್ ಪಿ. ರವಿಕುಮಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಾಜ್ಯ ಸರ್ಕಾರದ ಎಸಿಎಸ್ ವಂದನಾ ಶರ್ಮಾ, ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

ವೈದ್ಯಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರ್​.ಅಶೋಕ್; ಹಳ್ಳಿಯಲ್ಲೇ ನಡೆಯಲಿದೆ ಕೊವಿಡ್ ಪರೀಕ್ಷೆ

(CM BS Yediyurappa directs in a virtual meeting with district collectors to take appropriate action to prevent Covid pandemic in Karnataka)