ಆಶಾ ಕಾರ್ಯಕರ್ತೆಯರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂವಾದ; ಕೋವಿಡ್ 19 ನಿರ್ವಹಣೆಗೆ ಮುಕ್ತ ಕಂಠದಿಂದ ಶ್ಲಾಘನೆ

| Updated By: ಸಾಧು ಶ್ರೀನಾಥ್​

Updated on: Jun 08, 2021 | 4:01 PM

ASHA workers: ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಶಾ ಕಾರ್ಯಕರ್ತೆಯರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂವಾದ; ಕೋವಿಡ್ 19 ನಿರ್ವಹಣೆಗೆ ಮುಕ್ತ ಕಂಠದಿಂದ ಶ್ಲಾಘನೆ
ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ; ಕೋವಿಡ್ 19 ನಿರ್ವಹಣೆಗೆ ಮುಕ್ತ ಕಂಠದಿಂದ ಶ್ಲಾಘನೆ
Follow us on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆಶಾ ಕಾರ್ಯಕರ್ತೆಯರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್ 19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು. ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಗಮನಿಸಿ, ಕೋವಿಡ್ 19 ಎರಡನೇ ಅಲೆಯ ಪರಿಹಾರ ಪ್ಯಾಕೇಜ್ ನಡಿ 3 ಸಾವಿರ ರೂ. ಸಹಾಯಧನ ಘೋಷಿಸಿರುವುದಾಗಿ ತಿಳಿಸಿದರು.

ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಆರೋಗ್ಯದ ಸ್ಥಿತಿ ಗತಿ, ಕಾರ್ಯ ನಿರ್ವಹಣೆ, ಅವರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ವಿವರ, ಸಾರ್ವಜನಿಕರು, ಮೇಲಾಧಿಕಾರಿಗಳ ಸಹಕಾರ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.

ಸೋಂಕಿತರು ಕೋವಿಡ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು.. ಆದರೆ ಈಗ ಸಹಕರಿಸುತ್ತಿದ್ದಾರೆ

ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಲಸಿಕೆ ಹಾಕಿಸಲು ತಮ್ಮ ಗ್ರಾಮದ ಜನರ ಮನವೊಲಿಸಿ, ಮೇಲಾಧಿಕಾರಿಗಳ ಸಹಾಯದಿಂದ ವಾಹನ ವ್ಯವಸ್ಥೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಲಸಿಕೆ ಹಾಕಿಸಿದ್ದನ್ನು ಸ್ಮರಿಸಿಕೊಂಡರು.

ಕೋವಿಡ್ ಪೀಡಿತರಾಗಿದ್ದ ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ. ಕೋವಿಡ್ ಕೇರ್ ಸೆಂಟರಿನಿಂದಲೇ ಸಂವಾದದಲ್ಲಿ ಪಾಲ್ಗೊಂಡರು. ಕಳೆದ 15 ದಿನಗಳ ವರೆಗೆ ತಮ್ಮ ಗ್ರಾಮ ಕೋವಿಡ್ ಮುಕ್ತವಾಗಿತ್ತು. ಇದೀಗ ಏಳು ಪ್ರಕರಣಗಳು ಕಂಡು ಬಂದಿವೆ. ಇಬ್ಬರು ಹೋಂ ಐಸೊಲೇಷನ್ ನಲ್ಲಿದ್ದು, ಉಳಿದವರು ಕೋವಿಡ್ ಕೇರ್ ಸೆಂಟರಿನಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು.

ಜನರು ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ತಮ್ಮ ಪತಿಗೇ ಮೊದಲಿಗೆ ಲಸಿಕೆ ಕೊಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ ಅನುಭವವನ್ನು ರಾಮನಗರದ ಶಿವಲಿಂಗಮ್ಮ ಹಂಚಿಕೊಂಡರು. ವಿಜಯಪುರ ಜಿಲ್ಲೆಯ ದೀಪಾ ಬಜ್ಜನವರ ಅವರು ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಲು ಜನರು ಹಿಂದೇಟು ಹಾಕಿದ ಅನುಭವವನ್ನು ವಿವರಿಸಿದರು.

ಸಬ್ಬಮಂಗಲದ ರತ್ನಮ್ಮ ಅವರು, ಮನೆ ಮನೆಗೆ ಭೇಟಿ ನೀಡಿ, ಅರಿವು ಮೂಡಿಸುವುದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್, ತಮ್ಮ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ 120 ಜನರಲ್ಲಿ 115 ಜನರಿಗೆ ಲಸಿಕೆ ಹಾಕಿಸಿರುವುದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಬಡಜನರ ಚಿಕಿತ್ಸೆಗೆ ದಾನಿಗಳಿಂದ ನೆರವು ದೊರಕಿಸುವ ಪ್ರಯತ್ನ ಮಾಡಿರುವುದನ್ನು ಮುಖ್ಯಮಂತ್ರಿ ಶ್ಲಾಘಿಸಿದರು.

ಸಂವಾದದ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಸುರಕ್ಷಿತ ಎಂಬುದನ್ನು ಮನವರಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಜೊತೆಗೆ, ಐ ಎಲ್ ಐ, ಸಾರಿ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು.

ಸಂವಾದದ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಪ್ರೇಮಾ ಪ್ರಕಾಶ್ ಕಬ್ಬೂರು, ದಕ್ಷಿಣ ಕನ್ನಡ ಜಿಲ್ಲೆ ಸುಲ್ಕೇರಿಯ ಹೇಮಲತಾ, ರಾಮನಗರ ಜಿಲ್ಲೆಯ ದೊಡ್ಡಗಂಗವಾಡಿಯ ಶಿವಲಿಂಗಮ್ಮ, ವಿಜಯಪುರ ಜಿಲ್ಲೆ ಕಂಬಾಗಿಯ ದೀಪಾ ಬಜ್ಜನವರ್, ಬೆಂಗಳೂರು ನಗರ ಜಿಲ್ಲೆ ಸಬ್ಬಮಂಗಲದ ರತ್ನಮ್ಮ, ಬಳ್ಳಾರಿ ಜಿಲ್ಲೆ ದಬ್ಬೂರಿನ ಪರಿಮಳಾ, ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ., ಕೊಪ್ಪಳ ಜಿಲ್ಲೆ ನವಲಿಯ ಲಕ್ಷ್ಮವ್ವ ನಾಯಕ್, ರಾಯಚೂರು ಜಿಲ್ಲೆ ಗಣಮೂರಿನ ಇಂದಿರಾ, ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಮುಖ್ಯಮಂತ್ರಿಯವರೊಂದಿಗೆ ಸಂವಾದ ನಡೆಸಿದರು.

ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.

(CM BS Yediyurappa interacts with ASHA workers in Karnataka during coronavirus times)

Published On - 4:00 pm, Tue, 8 June 21