ಬೆಳಗಾವಿ: ಸಾರಿಗೆ ಸಿಬ್ಬಂದಿಗೆ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ. ಬಸ್ಗಳನ್ನ ಓಡಿಸದೆ ಇದ್ದರೆ ಸಂಬಳ ಸಿಗಲ್ಲ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಕಾನೂನು ರೀತಿಯಲ್ಲಿ ಕಠಿಣ ಕ್ರಮಕೈಗೊಳ್ಳಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಜನರ ಹಿತದೃಷ್ಟಿಯಿಂದ ನಾಳೆಯಿಂದ ಬಸ್ಗಳನ್ನ ಓಡಿಸಿ. ಇಲ್ಲದಿದ್ದರೆ ಕಾನೂನು ಕ್ರಮದ ತೀರ್ಮಾನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ಮಧ್ಯಾಹ್ನ ನಾನು ಬೆಂಗಳೂರಿಗೆ ಹೋಗುತ್ತೇನೆ. ನನ್ನಿಂದಾಗುವ ಎಲ್ಲಾ ಪ್ರಯತ್ನ ಮಾಡುವೆ. ನಾಳೆ ಖಾಸಗಿ ವಾಹನಗಳ ಮಾಲೀಕರ ಜತೆ ಚರ್ಚಿಸುತ್ತೇನೆ. ಸಭೆಯ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. 6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ. ಸಿಬ್ಬಂದಿಗೆ ಶೇಕಡಾ 8ರಷ್ಟು ವೇತನ ಹೆಚ್ಚಳ ಮಾಡುತ್ತೇವೆ. ಒಪ್ಪಿಕೊಳ್ಳುವುದು ಬಿಡುವುದು ಸಿಬ್ಬಂದಿಗೆ ಬಿಟ್ಟ ವಿಚಾರ. ಇಷ್ಟ ಇದ್ದರೆ ಬರಲಿ, ಇಲ್ಲದಿದ್ದರೆ ಕಾನೂನು ಕ್ರಮ ನಿಶ್ಚಿತ ಎಂದು ಯಡಿಯೂರಪ್ಪ ಕಟು ನುಡಿಗಳಿಂದ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ತಮ್ಮ ಬೇಡಿಕಗಳನ್ನು ಮುಂದಿಟ್ಟು ಬುಧವಾರದಂದು ನಡೆಸಿದ ಮುಷ್ಕರದಿಂದಾಗಿ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತು. ಗಾಬರಿ ಹುಟ್ಟಿಸುವ ಸಂಗತಿಯೆಂದರೆ ನಾಳೆಯೂ (ಗುರುವಾರ) ಸಿಬ್ಬಂದಿ ವರ್ಗ ಮುಷ್ಕರ ಮುಂದುವರಿಸುವ ನಿರ್ಧಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಪತ್ರಿಕಾ ಪ್ರಕಟಣೆಯೋದನ್ನು ಹೊರಡಿಸಿದ್ದು, ಜನರು ಆತಂಕಪಡುವ ಅವಶ್ಯಕತೆಯಿಲ್ಲ, ಜನರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
‘ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದರೂ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ಪ್ರಾರಂಭಿಸಿರುವುದು ಮತ್ತು ನಾಳೆಯೂ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ನಿಜಕ್ಕೂ ದುರ್ದೈವದ ವಿಚಾರವಾಗಿದೆ. ಆದರೆ ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು.’ ಎಂದು ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.
‘ಈಗಾಗಲೇ ತಿಳಿಸಿರುವಂತೆ ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಅನುಮತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಈ ಬಗ್ಗೆ ಅನುಮತಿ ನೀಡಿದಲ್ಲಿ ಈ ಬಗ್ಗೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು,’ ಎಂದು ಸವದಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Transport Workers Strike: ಸಾರಿಗೆ ನೌಕರರ ಮುಷ್ಕರದ ಈ ದಿನ ಏನೇನಾಯ್ತು?
ಇದನ್ನೂ ಓದಿ: Bus Strike: ಸಾರಿಗೆ ನೌಕರರ ಒಂದು ದಿನದ ಮುಷ್ಕರದಿಂದ ನಿಗಮಗಳಿಗೆ ಆದ ನಷ್ಟವೆಷ್ಟು ಗೊತ್ತಾ?
Published On - 11:12 pm, Wed, 7 April 21