ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಿ ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ. ಐವರು ಕ್ರೀಡಾಪಟುಗಳಿಗೆ ತಲಾ $10 ಲಕ್ಷ ನಗದು ಪ್ರೋತ್ಸಾಹ ಧನ ನೀಡಿ ಯಡಿಯೂರಪ್ಪ ಗೌರವಿಸಿದ್ದಾರೆ.
ಈಕ್ವೆಸ್ಟ್ರಿಯನ್ ಕ್ರೀಡಾಪಟು ಪೌವಾದ್ ಮಿರ್ಜಾ, ಹಾಕಿಪಟು ಎಸ್.ವಿ. ಸುನಿಲ್, ಈಜುಪಟು ಶ್ರೀಹರಿ ನಟರಾಜ್, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್ಗೆ ಸರ್ಕಾರದಿಂದ ಗೌರವ ಧನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಕೆಒಎ ಅಧ್ಯಕ್ಷ ಗೋವಿಂದ ರಾಜ್ ಭಾಗವಹಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ಗೆ ರಾಜ್ಯದಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ನೀಡಲಾಗಿದೆ. ಗೃಹಕಚೇರಿ ಕೃಷ್ಣಾದಲ್ಲಿ ನಗದು ಪ್ರೋತ್ಸಾಹ ಧನ ನೀಡಿ ಸಿಎಂ ಯಡಿಯೂರಪ್ಪ ಗೌರವಿಸಿದ್ದಾರೆ. ಕ್ರೀಡಾಪಟುಗಳು, ಅವರ ಕುಟುಂಬದವರಿಗೆ ಸಿಎಂ ಸನ್ಮಾನ ಮಾಡಿದ್ದಾರೆ.
ಟೋಕಿಯೋಗೆ (Tokyo) ಹೊರಡಲು ಸಜ್ಜಾಗಿರುವ ಭಾರತದ ಪ್ರಮುಖ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದ್ದರು. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನದ ಜೊತೆ ನಿಮ್ಮಲ್ಲಿರುವ ಶೇ. 100 ರಷ್ಟು ಪ್ರಯತ್ನ ನೀಡಿ ಎಂದು ಧೈರ್ಯ ತುಂಬಿದ್ದರು.
ಈ ವೇಳೆ ಪ್ರಮಖ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಜೊತೆ ಮೋದಿ ತುಂಬಾನೆ ಆತ್ಮೀಯವಾಗಿ ಮಾತನಾಡಿದರು. ಪಿವಿ ಸಿಂಧುಗೆ ಐಸ್ಕ್ರೀಂ ಎಂದರೆ ತುಂಬಾ ಇಷ್ಟ ಎಂದು ತಿಳಿದ ಪ್ರಧಾನಿ ಅವರು, ತಾವು ಈ ಒಲಂಪಿಕ್ಸ್ ಕ್ರೀಡೆ ಮುಗಿದ ಬಳಿಕ ಒಟ್ಟಿಗೆ ಐಸ್ಕ್ರೀಂ ತಿನ್ನೋಣ ಎಂದು ನಗುತ್ತಾ ಹೇಳಿದ್ದರು. ಒಲಂಪಿಕ್ಸ್ ಸಿದ್ಧತೆಯಲ್ಲಿರುವ ಬ್ಯಾಡ್ಮಿಂಟನ್ ತಾರೆ ಸಿಂಧು ಡಯಟ್ ದೃಷ್ಟಿಯಿಂದ ಐಸ್ ಕ್ರೀಂ ತಿನ್ನುವುದನ್ನು ಸದ್ಯಕ್ಕೆ ತ್ಯಜಿಸಿರುವುದಾಗಿ ತಿಳಿಸಿದರು. ಇದನ್ನು ಕೇಳಿದ ಪ್ರಧಾನಿಗಳು ಟೋಕಿಯಾದಿಂದ ಮರಳಿದ ಬಳಿಕ ಭೇಟಿಯಾದಾಗ ಒಟ್ಟಿಗೆ ಐಸ್ಕ್ರೀಂ ಸವಿಯೋಣ ಎಂದಿದ್ದರು.
ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದರು. ಇದೇ ಸಂದರ್ಭ ಕುಸ್ತಿಪಟು ವಿನೇಶ್ ಪೋಗಟ್ ಜೊತೆಗೂ ಕೆಲ ಸಮಯ ಮಾತನಾಡಿದ್ದರು. ನಿಮ್ಮ ಬಯೋಪಿಕ್ ಶೀಘ್ರದಲ್ಲೇ ನಿರೀಕ್ಷಿಸಬಹುದೇ ಎಂದು ವಿನೇಶ್ ಪೋಗಟ್ ಬಳಿ ಪಿಎಂ ಕೇಳಿದ್ದು ವಿಶೇಷವಾಗಿತ್ತು. ಅಂತೆಯೆ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದ್ದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ‘ ಎಂದು ಕೇಳಿದ್ದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ: Tokyo Olympics: ನನ್ನ ಬೆಂಬಲ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲ್ಲಿರುವ ಭಾರತದ ಹಾಕಿ ತಂಡಕ್ಕೆ: ಪಾಕ್ ಮಾಜಿ ಆಟಗಾರ
Published On - 5:59 pm, Wed, 14 July 21