ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಪ್ರಾಸಿಕ್ಯೂಷನ್​ಗೆ ಅನುಮತಿ ಬೆನ್ನಲ್ಲೇ ಶಾಸಕಾಂಗ ಸಭೆ ಕರೆದ ಸಿಎಂ

| Updated By: ರಮೇಶ್ ಬಿ. ಜವಳಗೇರಾ

Updated on: Aug 18, 2024 | 11:53 AM

ಇತಿಹಾಸದ ಪುಟಗಳನ್ನ ಜಾಲಾಡಿದಾಯ್ತು. ಕಾನೂನು ಪಂಡಿತರ ಜೊತೆ ಸಾಲು ಸಾಲು ಚರ್ಚೆ ಮಾಡಿದ್ದು ಆಯ್ತು. ಇದೆಲ್ಲವನ್ನೂ ಅಳೆದು ತೂಗಿ ಇವತ್ತು ಕರ್ನಾಟಕದ ರಾಜ್ಯಪಾಲರು ಇತಿಹಾಸದಲ್ಲಿ ಅಚ್ಚಳಿಯದೇ ಇರೋ ಹೆಜ್ಜೆ ಇಟ್ಟಿದ್ದಾರೆ. ಮುಡಾದಲ್ಲಿ ಸೈಟ್ ಪಡೆದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ನಿರ್ಣಯ ಇದೀಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದ್ದು, ಇದೀಗ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಪ್ರಾಸಿಕ್ಯೂಷನ್​ಗೆ ಅನುಮತಿ ಬೆನ್ನಲ್ಲೇ ಶಾಸಕಾಂಗ ಸಭೆ ಕರೆದ ಸಿಎಂ
ಸಿದ್ದರಾಮಯ್ಯ
Follow us on

ಬೆಂಗಳೂರು, (ಆಗಸ್ಟ್ 18): ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅಸ್ತ್ರವನ್ನ ಪ್ರಯೋಗಿಸಲಾಗಿದೆ. ಮುಡಾದಲ್ಲಿ ಸೈಟ್ ಪಡೆದ ವಿಚಾರವಾಗಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದೇ ಪ್ರಾಸಿಕ್ಯೂಷನ್ ಆದೇಶದ ವಿರುದ್ದ ಇಡೀ ಸಂಪುಟವೇ ತಿರುಗಿ ಬಿದ್ದಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಹೇಳಿದ್ದನ್ನೇ ಮಾಡುತ್ತಿದ್ದಾರೆ ಎಂದು ನೇರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ದ ಬೆಂಕಿ ಉಗುಳುತ್ತಿದ್ದಾರೆ. ಇನ್ನೊಂದೆಡೆ ಇಡೀ ಸಚಿವ ಸಂಪುಟ, ಹೈಕಮಾಂಡ್​ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ, ಬುಧವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್​ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಈ ಶಾಸಕಾಂಗ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.

ಹೌದು…ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ(ಆಗಸ್ಟ್ 21) ಶಾಸಕಾಂಗ ಪಕ್ಷದ (ಸಿಎಲ್​ಪಿ) ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಶಾಸಕರೇ ಬಲ. ಹೀಗಾಗಿ ಶಾಸಕರ ಸಭೆ ಕರೆದು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ರಾಜ್ಯಪಾಲರ ವಿರುದ್ಧ ಶಾಸಕಾಂಗ ಸಭೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಇಡೀ ಪ್ರಕರಣದ ಬೆಳವಣಿಗೆ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ. ಜೊತೆಗೆ ಮುಂದಿನ ಹೋರಾಟಗಳಿಗೆ ಶಾಸಕರ ಸಹಕಾರ ಕೋರಲಿದ್ದಾರೆ.

ಇದನ್ನೂ ಓದಿ: ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ

ರಾಜ್ಯಪಾಲರು ಆದೇಶಿಸಿರೋ ಇದೊಂದು ಪ್ರಾಸಿಕ್ಯೂಷನ್, ನೇರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವೆ ಮತ್ತೊಂದು ಹೋರಾಟಕ್ಕೆ ಕಾರಣವಾಗಿದೆ. ಯಾಕಂದ್ರೆ ಇನ್ಮೇಲೆ ನಡೆಯೋ ರಾಜಕೀಯ ವಾಗ್ಯುದ್ಧ ಎರಡು ರೀತಿಯಾಗಿ ಬದಲಾಗುತ್ತಿದೆ. ಒಂದು ಕಾನೂನು ಹೋರಾಟ. ಮತ್ತೊಂದು ರಾಜಕೀಯ ಹೋರಾಟ. ಈ ಎರಡೂ ಹೋರಾಟಗಳು ಬೇರೇ ನಡೆದರೂ,‌ ರಾಜ್ಯದ ರಾಜಕೀಯ ಧಗಧಗಿಸುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ದ ಆದೇಶಿಸಿರುವ ಪ್ರಾಸಿಕ್ಯೂಷನ್.

ಅದೇನೇ ಹೇಳಿ, ಆರೋಪ ಪ್ರತ್ಯಾರೋಪ ಮಧ್ಯೆ, ರಾಜ್ಯದ ರಾಜಕಾರಣದಲ್ಲಿ ಪ್ರಾಸಿಕ್ಯೂಷನ್ ಎಂಬ ಬಿರುಗಾಳಿ ಎದ್ದು ಇಡೀ ಸರ್ಕಾರವನ್ನೇ ನೆಮ್ಮದಿಯನ್ನೇ ಕಿತ್ತು ಎಸೆದಿದೆ. ವೀಕೆಂಡ್ ಮೂಡ್ ನಲ್ಲಿದ್ದ ಸಿಎಂ ಮತ್ತು ಸಂಪುಟದ ಸಚಿವರಿಗೆ ಕಾರ್ಮೂಡದ ಪೆಟ್ಟು ಬಿದ್ದಿದೆ.. ಈಗ ಮುಂದೆ ನಡೆಯೋದೇ ಎರಡು ಯುದ್ಧಗಳು.. ಕಾನೂನು ಸಮರ ಒಳಗೆ ನಡೆದ್ರೆ ಮತ್ತೊಂದ್ಕಡೆ, ರಾಜಕೀಯ ಜಿದ್ದಾಜಿದ್ದಿನ ಕಾಳಗ ಹೊರಗೆ ನಡೆಯೋದಂತೂ ಸತ್ಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ