ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್ ಪಾಳಯದಲ್ಲಿ ಕಾನೂನು ಹೋರಾಟದ ಚಟುವಟಿಕೆ ಬಿರುಸುಗೊಂಡಿದೆ. ಸೋಮವಾರ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲು ಕೆಪಿಸಿಸಿ ಸೂಚನೆ ನೀಡಿದೆ.
ಬೆಂಗಳೂರು, ಆಗಸ್ಟ್ 17: ಮುಡಾದಲ್ಲಿ (muda) ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸೂಚನೆ ನೀಡಿದೆ.
ಸದ್ಯ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಖಂಡಿಸಿ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇದೀಗ ಕೆಪಿಸಿಸಿ ಕೂಡ ರಾಜ್ಯಾದ್ಯಂತ ಪ್ರತಿಭಟಿಸಲು ಮುಂದಾಗಿದ್ದು, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ.
ಪ್ರಾಸಿಕ್ಯೂಷನ್ ಸಂಬಂಧ ಎಐಸಿಸಿ ನಾಯಕರು ಕೂಡ ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಉಸ್ತುವಾರಿ ಸುರ್ಜೇವಾಲ ಕರೆ ಮಾಡಿದ್ದು, ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ. ನಿಮ್ಮ ಜತೆ ನಾವಿದ್ದೇವೆ, ಧೈರ್ಯವಾಗಿರಿ. ಏನೇ ಆದರೂ ಕಾನೂನು ಹೋರಾಟ ನಡೆಸೋಣ ಅಂತ ಹೇಳೋ ಮೂಲಕ ರಾಜ್ಯವ್ಯಾಪಿ ಸಮರಕ್ಕೆ ರಣಕಹಳೆ ಮೊಳಗಿಸುವಂತೆ ಸೂಚನೆ ಕೊಟ್ಟಿದ್ದಾರೆ.
ರಾಜ್ಯಪಾಲರ ನಡೆ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ
ರಾಜ್ಯಪಾಲರ ನಡೆ ಖಂಡಿಸಿ ಕಲಬುರಗಿ ಜಿಲ್ಲಾ ಪ್ರದೇಶ ಕುರುಬ ಸಂಘ ಹಾಗೂ ಹಿಂದುಳಿದ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಟೈಟ್ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಿಂದ ರಾಜ್ಯಪಾಲರನ್ನ ತೊಲಿಗಿಸಿ, ಕೇಂದ್ರ ಕೈಗೊಂಬೆಯಾದ ರಾಜ್ಯಪಾಲರನ್ನ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ, ಕಾನೂನು ಸಮಾಲೋಚನೆಯಲ್ಲಿ ಸಿಎಂ
ಇನ್ನು ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕೂಡ ಶೋಷಿತ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಗಿದೆ. ಡಿವೈಎಸ್ಪಿ ದಿನಕರ್ ಜತೆ ಅಹಿಂದ ಮುಖಂಡ ಬಿ.ಟಿ ಜಗದೀಶ್ ಮತ್ತಿತರರು ವಾಗ್ವಾದ ಮಾಡಿದ್ದಾರೆ. ಗವರ್ನರ್ ಗೋಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಭಾಗಿ ಆಗಿದ್ದರು.
ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಕಾಂಗ್ರೆಸ್ನಿಂದ ಪ್ರತಿಭಟನೆ ಮಾಡಿದ್ದು, ಗೋ ಬ್ಯಾಕ್ ಚಳುವಳಿ ಮೂಲಕ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ದವು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಜ್ಯಪಾಲರ ನಡೆ ಸಂವಿಧಾನಬಾಹಿರ, ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು
ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ. ಷಡ್ಯಂತರ ಮಾಡಿ ಸಿಎಂ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಕಾಂಗ್ರೆಸ್ ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.