
ಬೆಂಗಳೂರು, (ಅಕ್ಟೋಬರ್ 13): ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ (cabinet reshuffle) ಬಗ್ಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಯೋಜಿಸಿದ್ದ ಡಿನ್ನರ್ ಪಾರ್ಟಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸಚಿವರಿಗೆ ಔತಣಕೂಟವೋ ಅಥವಾ ಬೀಳ್ಕೊಡಿಗೆಯೋ ಎನ್ನುವ ಚರ್ಚೆಗೆ ಗ್ರಾಸವಾಗಿತ್ತು.ಇದೀಗ ಸಿಎಂ ಸಿದ್ದರಾಮಯ್ಯನವರು ತಮ್ಮ ಕಾವೇರಿ ನಿವಾಸದಲ್ಲಿ ಸಚಿವರುಗಳಿಗೆ ಆಯೋಜಿಸಿದ್ದ ಡಿನ್ನರ್ ಪಾರ್ಟಿ ಅಂತ್ಯವಾಗಿದ್ದು, ವೆರೈಟಿ ಊಟದ ಜೊತೆಗೆ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಆಗಿವೆ. ಈ ವೇಳೆ ಸಿದ್ದರಾಮಯ್ಯನವರು ಸಚಿವರಿಗೆ ಕೆಲ ಕಿವಿಮಾತು ಕೇಳಿದ್ದಾರೆ. ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ಸಚಿವರಿಗೆ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ
ಊಟದ ಜೊತೆ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಆಸ್ತಿಗಳಲ್ಲಿ RSS ಚಟುವಟಿಕೆಗೆ ನಿರ್ಬಂಧ, , ಸಚಿವ ಸಂಪುಟ ಪುನರ್ ರಚನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ, ಬಿಹಾರ್ ವಿಧಾನಸಭೆ ಚುನಾವಣೆ ಹಾಗೂ ಅನುದಾನ ಬಳಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಬಂದು ಎರಡೂವರೆ ವರ್ಷ ಆಗುತ್ತಿದೆ. ಇದು ನಿಮಗೂ ಗೊತ್ತಿರೋದೆ. ಆದರೆ ನಿಮ್ಮ ಇಲಾಖೆಗಳಲ್ಲಿ ಸುಧಾರಣೆ ತನ್ನಿ. ಬಿಜೆಪಿ ದುರಾಡಳಿತವನ್ನ ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ಜನಸಾಮಾನ್ಯರ ಪರ ಸರ್ಕಾರ ಇರಬೇಕಾಗುತ್ತದೆ. ಇಲಾಖೆಗಳ ಮೂಲಕ ಜನರ ಕೆಲಸ ಮಾಡಿ. ಇಲಾಖೆಗೂ ಒಳ್ಳೆಯ ಹೆಸರು ತನ್ನಿ, ಸರ್ಕಾರಕ್ಕೂ ಉತ್ತಮ ಹೆಸರು ತನ್ನಿ. ಗ್ಯಾರೆಂಟಿಗಳಿಂದ ಸ್ವಲ್ಪ ಅಭಿವೃದ್ಧಿ ಹಿನ್ನಡೆಯಾಗಿರಬಹುದು. ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ. ಆದಾಯದ ಮಾರ್ಗಗಳೂ ಓಪನ್ ಆಗುತ್ತಿವೆ. ಇಲಾಖೆಯಲ್ಲಿರುವ ಹಣ ಸದ್ಬಳಕೆ ಮಾಡಿ. ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡೋಣ ಎಂದು ಎಂದರು.
ಸಂಪುಟ ಪುನಾರಚನೆ ವಿಚಾರವನ್ನ ಖುದ್ದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಸಂಪುಟ ಪುನಾರಚನೆ ಆಗಲಿದೆ, ಸಿದ್ಧವಾಗಿರಿ ಎಂದು ಸಂಪುಟ ಸಹದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವಕಾಶ ಇದ್ದಾಗ ಚೆನ್ನಾಗಿ ಕೆಲಸ ಮಾಡಿ. ಹೈಕಮಾಂಡ್ ಕೂಡ ಎಲ್ಲವನ್ನ ಗಮನಿಸುತ್ತಿದೆ. ಸಂಪುಟ ಪುನರ್ ರಚನೆ ಮಾಧ್ಯಮಗಳ ವರದಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಮಯ ಬಂದಾಗ ವರಿಷ್ಠರು ನಿರ್ಧಾರ ಮಡುತ್ತಾರೆ. ಈಗ ಅಭಿವೃದ್ಧಿಯ ಕಡೆ ನಿಮ್ಮ ಗಮನವಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ ಬಳಿಕ ಸಚಿವರಿಗೆ ಸಿಎಂ ಕಿವಿಮಾತು ಹೇಳಿದರು.
ಇನ್ನು ಔತಣಕೂಟದಲ್ಲಿ ಬಿಹಾರ್ ಚುನಾವಣೆ ಬಗ್ಗೆ ಚರ್ಚೆಯಾಗಿದ್ದು, ಬಿಹಾರ ಚುನಾವಣೆಗೆ ಎಲ್ಲರ ಸಹಕಾರವಿರಲಿ-ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಯಾವಾಗ ಬೇಕಾದ್ರೂ ಸೂಚನೆ ಬರಬಹುದು. ಹೈಕಮಾಂಡ್‌ನಿಂದ ಸೂಚನೆ ಬಂದಾಗ ಪ್ರಚಾರಕ್ಕೆ ಅಲ್ಲಿಗೆ ಹೋಗಬೇಕಾಗುತ್ತದೆ. ಚುನಾವಣಾ ಕೆಲಸಕ್ಕೂ ರೆಡಿ ಇರಬೇಕು. ನಿಮ್ಮ ಎಲ್ಲಾ ಸಹಕಾರವೂ ಬೇಕಿದೆ ಎಂದಿದ್ದಾರೆ.
ಇನ್ನು ಔತಣಕೂಟದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಔತಣಕೂಟದಲ್ಲಿ ಮುದ್ದೆ, ಗ್ರೇವಿ, ಚಿಕನ್, ಮಟನ್ ಇಡ್ಲಿ ಎಲ್ಲಾ ಇತ್ತು. ಊಟದ ಜೊತೆ ಉಪ್ಪಿನಕಾಯಿ ಇರಲಿಲ್ಲ. ಸಚಿವರನ್ನು ಕರೆದು ವೈಯಕ್ತಿಕ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಒಬ್ಬೊಬ್ಬರು ಸಚಿವರದ್ದು ಒಂದೊಂದು ಇರುತ್ತೆ. ನನ್ನ ಜೊತೆ ಇಲಾಖೆ ವಿಚಾರವಾಗಿ ಮಾತನಾಡಿದರು. ಸಾಮಾನ್ಯವಾಗಿ ಪ್ರತಿವರ್ಷವೂ ಸಭೆ ಕರೆಯುತ್ತಾರೆ ಎಂದರು.
ಯುಗಾದಿ ಸಮಯದಲ್ಲಿ ನಾನ್ ವೆಜ್ ಬಿಟ್ಟಿದ್ದೆ. ಇವತ್ತು ವೆಜ್ ಊಟ ಮಾಡಿದ್ದೇನೆ. ಇನ್ನು ಐದು ಪಾಲಿಕೆ ಚುನಾವಣೆ ಇದೆ. zp, tp ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಸಚಿವರ ಮೌಲ್ಯಮಾಪನ, ಕ್ಯಾಬಿನೆಟ್ ರಿಶಫಲ್ ಬಗ್ಗೆಯೂ ಚರ್ಚೆ ಆಗಿಲ್ಲ. ವಿಪಕ್ಷದ ಟೀಕೆ ಬಗ್ಗೆಯೂ ಚರ್ಚೆ ಆಗಿಲ್ಲ. ಸರ್ಕಾರ ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಅದು ಇದು ಹೇಳುತ್ತಲೇ ಇರ್ತಾರೆ. ಯಾವ ಕ್ರಾಂತಿನೂ ಇಲ್ಲ ,ಅದೆಲ್ಲಾ ಬ್ರಾಂತಿ ಎಂದರು.
Published On - 9:26 pm, Mon, 13 October 25