AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಕಾನೂನು ಬಾಹಿರ ಕೆಲಸ ಮಾಡಿದ್ರೆ ಕ್ರಮಕೈಗೊಳ್ಳುವಂತೆ ಸೂಚನೆ

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿದೆ. ಸಂಪೂರ್ಣವಾಗಿ ಅಪರಾಧ ನಿರ್ಮೂಲನೆ ಮಾಡಲಾಗದಿದ್ದರೂ, ಕಡಿಮೆಗೊಳಿಸಲು ಸಾಧ್ಯವಿದೆ. ತಡೆಯಲು ಸಾಧ್ಯವಿರುವ ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಕಾನೂನು ಬಾಹಿರ ಕೆಲಸ ಮಾಡಿದ್ರೆ ಕ್ರಮಕೈಗೊಳ್ಳುವಂತೆ ಸೂಚನೆ
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 06, 2024 | 6:35 PM

Share

ಬೆಂಗಳೂರು, ಜನವರಿ 6: ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಶಾಂತಿಯುತ ಹಾಗೂ ಭಯವಿಲ್ಲದ ವಾತಾವರಣ ನಿರ್ಮಿಸಲು ಬೆಂಗಳೂರು ನಗರ ಪೊಲೀಸರು ಶ್ರಮಿಸಬೇಕೆಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ  ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿದೆ. ಸಂಪೂರ್ಣವಾಗಿ ಅಪರಾಧ ನಿರ್ಮೂಲನೆ ಮಾಡಲಾಗದಿದ್ದರೂ, ಕಡಿಮೆಗೊಳಿಸಲು ಸಾಧ್ಯವಿದೆ. ತಡೆಯಲು ಸಾಧ್ಯವಿರುವ ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ.

ಡ್ರಗ್ಸ್‌ ಹಾವಳಿ ತಡೆಗಟ್ಟುವಂತೆ ಸೂಚನೆ

ಸಮಾಜದ ಒಳಿತಿಗಾಗಿ ಡ್ರಗ್ಸ್‌ ಮಾಫಿಯಾವನ್ನು ಮಟ್ಟಹಾಕುವ ಬಗ್ಗೆ ಎಲ್ಲ ಹಂತದ ಪೊಲೀಸ್‌ ಅಧಿಕಾರಿಗಳು ತೀರ್ಮಾನ ಕೈಗೊಂಡು ಅನುಷ್ಠಾನಗೊಳಿಸಬೇಕು. ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ಜೀವನ ಮಾಡುವವರನ್ನು ಗುರುತಿಸಿ, ಅವರ ರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಪೊಲೀಸ್‌ ಬೀಟ್‌ ವ್ಯವಸ್ಥೆ ಬಲಪಡಿಸಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ:  ಫೋಟೋ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್​, ಫೇಸ್​ಬುಕ್ ಹ್ಯಾಂಡ್ಲರ್ ವಿರುದ್ಧ ಬಿಜೆಪಿ ದೂರು

ನಗರದಲ್ಲಿರುವ 241 ಹೊಯ್ಸಳ ವಾಹನಗಳ ಗಸ್ತುಪಡೆಯನ್ನು ಬಲಪಡಿಸಿ, ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪೊಲೀಸ್‌ ಅಧಿಕಾರಿ, ಸಿಬ್ಬಂದಿ ರಿಯಲ್‌ ಎಸ್ಟೇಟ್‌ನವರ ಜೊತೆ ಶಾಮೀಲಾಗಿರುವುದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಸರಿಯಲ್ಲ. ಇದರಿಂದ ಜನರಿಗೆ ಪೊಲೀಸ್‌ ವ್ಯವಸ್ಥೆ ಮೇಲೆ ವಿಶ್ವಾಸ ಹೊರಟುಹೋಗುತ್ತದೆ.

ಇದನ್ನೂ ಓದಿ: ಸಿಎಂ ಭೇಟಿಯಾದ ಅತಿಥಿ ಉಪನ್ಯಾಸಕರ ನಿಯೋಗ; ಗೌರವಧನ ಹೆಚ್ಚಳಕ್ಕೆ ಸಿದ್ದರಾಮಯ್ಯ ಸಮ್ಮತಿ

ಸರ್ಕಾರ ಎಂದಿಗೂ ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ನಿಮಗೆ ಹೇಳುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಸರ್ಕಾರ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದರು. ನಗರದಲ್ಲಿ ರೌಡಿಸಂ ಅನ್ನು ಮಟ್ಟ ಹಾಕಬೇಕು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉತ್ತಮ ಬಂದೋಬಸ್ತ್‌ ವ್ಯವಸ್ಥೆ: ಸಿಎಂ ಅಭಿನಂದನೆ 

ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಉತ್ತಮವಾಗಿ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿ ನಗರದಲ್ಲಿ ಶಾಂತಿಯುತ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಶ್ರಮಿಸುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.