ರಾಜ್ಯದಲ್ಲಿ ಖಾಲಿಯಿರುವ ಎರಡೂವರೆ ಲಕ್ಷ ಹುದ್ದೆ ಭರ್ತಿಗೆ ಕ್ರಮ; ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ
ಒಂದೇ ಬಾರಿಗೆ ಎರಡೂವರೆ ಲಕ್ಷ ಖಾಲಿ ಹುದ್ದೆಗಳ ಭರ್ತಿ ಸಾಧ್ಯವಿಲ್ಲ. ಹಾಗಾಗಿ ಹಂತಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಂಗಳೂರು: ರಾಜ್ಯದಲ್ಲಿ ಖಾಲಿಯಿರುವ ಎರಡೂವರೆ ಲಕ್ಷ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಗಳವಾರ ಭರವಸೆ ನೀಡಿದರು. ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರು, ವೈದ್ಯರು ಸೇರಿದಂತೆ ಎಲ್ಲಾ ರೀತಿಯ ಹುದ್ದೆಗಳು ಖಾಲಿಯಿವೆ. ಹಂತಹಂತವಾಗಿ ಎಲ್ಲಾ ಹುದ್ದೆಗಳ ಭರ್ತಿಗೆ ಯೋಜನೆ ರೂಪಿಸಿದ್ದೇವೆ. ಖಾಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಒಂದೇ ಬಾರಿಗೆ ಎರಡೂವರೆ ಲಕ್ಷ ಖಾಲಿ ಹುದ್ದೆಗಳ ಭರ್ತಿ ಸಾಧ್ಯವಿಲ್ಲ. ಹಾಗಾಗಿ ಹಂತಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಡ್ರಗ್ಸ್ ಹಾವಳಿ ತಡೆಗೆ ಖಡಕ್ ವಾರ್ನಿಂಗ್
ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸರಿಂದ ಮಾಹಿತಿ ಕೇಳಿದ ಸಿದ್ದರಾಮಯ್ಯ ಅವರು ಡ್ರಗ್ಸ್ ದಂಧೆ ಮಟ್ಟಹಾಕುವಂತೆ ಸೂಚನೆ ನೀಡಿದರು. ಈ ವೇಳೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ, ನಗರದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಮಂಗಳೂರಿನ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದೇವೆ. ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದೇವೆ, ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಬಳಕೆ ಮಾಡುವವರ ಮನಪರಿವರ್ತನೆಗೆ ಕ್ರಮವಹಿಸಲಾಗಿದೆ ಎಂದರು.
ಇದನ್ನೂ ಓದಿ: ಮನೆ ಸಂಪೂರ್ಣ ಹಾನಿಯಾದವರಿಗೆ ಕೂಡಲೇ 5 ಲಕ್ಷ ರೂ. ನೀಡಿ: ದ.ಕ. ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ , ಗೂಂಡಾ ಕಾಯ್ದೆಯಡಿ ಕೇಸ್ ಹಾಕಿ ಮುಲಾಜಿಲ್ಲದೆ ಗಡಿಪಾರು ಮಾಡಿ. ಇದು ಸಮಾಜದಲ್ಲಿ ದೊಡ್ಡ ರೋಗ ಆಗಿ ಜನರನ್ನು ಹಾಳು ಮಾಡುತ್ತಿದೆ. ಡ್ರಗ್ಸ್ ಮಾಫಿಯಾದವರಿಗೆ ಭಯ ಹುಟ್ಟಿಸುವ ಕೆಲಸ ಮಾಡಬೇಕು ಎಂದರು. ಸೈಬರ್ ಕ್ರೈಮ್ ಬಗ್ಗೆಯೂ ನಿಗಾ ಇರಿಸುವಂತೆ ಸೂಚಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ