ಬೆಂಗಳೂರು, ಏಪ್ರಿಲ್ 13: ಲೋಕಸಭೆ ಚುನಾವಣೆಗೂ (Lok Sabha Election) ಮುನ್ನವೇ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಸೋಲೊಪ್ಪಿಕೊಂಡರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅವರು ನೀಡಿರುವ ಮಹತ್ವದ ಹೇಳಿಕೆ. ‘ಇಂಡಿಯಾ’ ಮೈತ್ರಿಕೂಟಕ್ಕೆ (INDIA Alliance) ಲೋಕಸಭೆ ಚುನಾವಣೆಯಲ್ಲಿ ಬಹುಮತ ಸಿಗದೇ ಇರಬಹುದು ಎಂದು ಅವರು ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯದಿರಬಹುದು. ಆದರೆ ಅದೇ ಎನ್‌ಡಿಎ ಮೈತ್ರಿಕೂಡ ಕೂಡ ಸಂಪೂರ್ಣ ಬಹುಮತವನ್ನು ಪಡೆಯುವುದಿಲ್ಲ. ಆದ್ದರಿಂದ, ‘ಇಂಡಿಯಾ’ (ಬಣ) ಮೈತ್ರಿಕೂಟವು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾದ ಸಿಎಂ ನವೀನ್ ಪಟ್ನಾಯಕ್, ಸಿಪಿಐ (ಎಂ) ಮತ್ತು ಇತರ ರಾಜಕೀಯ ಪಕ್ಷಗಳನ್ನು ಅವಲಂಬಿಸಬೇಕಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎನ್‌ಡಿಎ ಹೆಸರಿನಲ್ಲಿ ಬಿಜೆಪಿ ಕೂಡ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಬಿಜೆಪಿಯೊಂದೇ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ತನ್ನ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿರಬಹುದು, ಆದರೆ ಅದರ ಅರ್ಥ ಬಿಜೆಪಿ ತಾನಾಗಿ ಅಧಿಕಾರಕ್ಕೆ ಬಂದಿದೆ ಎಂದಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
VIDEO | Lok Sabha Elections 2024: “INDIA bloc may not get absolute majority, but at the same time, even NDA won’t get absolute majority either. So, INDIA (bloc) may have to depend on Mamata Banerjee from West Bengal, Naveen Patnaik from Odisha, CPI(M) and other political… pic.twitter.com/RGX8sKPus3
— Press Trust of India (@PTI_News) April 12, 2024
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಿದ್ದರಾಮಯ್ಯ ಅವರಿಂದ ಈ ಹೇಳಿಕೆ ಮೂಡಿಬಂದಿದೆ. ಲೋಕಸಭೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26ರಂದು 14 ಕ್ಷೇತ್ರಗಳಿಗೆ ಮತ್ತು ಮೇ 7ರಂದು ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಬೇಕೇ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಅದೆಲ್ಲಾ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿರುತ್ತದೆ. ಹೈಕಮಾಂಡ್ ನಿರ್ಧರಿಸಿದರೆ ನಾನೇ ಮುಂದುವರಿಯುತ್ತೇನೆ. ಇಲ್ಲವಾದಲ್ಲಿ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಲ್ಕು ವರ್ಷಗಳ ನಂತರ ಚುನಾವಣಾ ರಾಜಕೀಯದಲ್ಲಿ ಉಳಿಯುವುದಿಲ್ಲ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪುನರುಚ್ಚರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 am, Sat, 13 April 24