ಮಂಡ್ಯ, ಮಾರ್ಚ್ 10: ಸಂಸದೆ ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ, ಕಾಂಗ್ರೆಸ್ ಓಟ್ನಿಂದ ಅವರು ಗೆದ್ದಿದ್ದು. ಈಗ ಬಿಜೆಪಿ-ಜೆಡಿಎಸ್ ನಡುವೆ ತಿಕ್ಕಾಟ ಶುರುವಾಗಿದೆ. ಸುಮಲತಾಗೆ ಮೈತ್ರಿ ಟಿಕೆಟ್ ಕೊಡಬೇಕಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನೆ ಮಾಡಿದ್ದಾರೆ. ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ಗೆ ಟಿಕೆಟ್ ಕೊಡಬೇಕಾ ಅಂತಾ ತಿಕ್ಕಾಟ ಶುರುವಾಗಿದೆ. ಯಾರಿಗೆ ಕೊಟ್ಟರೂ ಈ ಬಾರಿ ಬಿಜೆಪಿ-ಜೆಡಿಎಸ್ ಗೆಲ್ಲಲ್ಲ. ಅಪವಿತ್ರ ಮೈತ್ರಿಯನ್ನ ಜನರು ಒಪ್ಪಲ್ಲ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರರನ್ನ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಹೆಚ್.ಡಿ.ಕುಮಾರಸ್ವಾಮಿಗೆ ನಾವು ಅಧಿಕಾರ ಕೊಟ್ಟಿದ್ದೆವು. ಆದರೆ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು. ಸಮ್ಮಿಶ್ರ ಸರ್ಕಾರ ಕೆಡವಿದ ಯಡಿಯೂರಪ್ಪ ಜತೆ ಕೈಜೋಡಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ನುಡಿದಂತೆ ನಡೆದವರನ್ನು ಬೆಂಬಲಿಸಿದರೆ ಅಭಿವೃದ್ಧಿ ಆಗುತ್ತೆ. ಕೊಟ್ಟ ಮಾತಿನಂತೆ ನಡೆಯುವವರನ್ನು ಬೆಂಬಲಿಸಬೇಕು. ನಾವು ಪ್ರಮುಖವಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಅನುಷ್ಠಾನಗೊಳಿಸಿದ್ದೇವೆ. ಪ್ರತಿನಿತ್ಯ 50-60 ಲಕ್ಷ ಮಹಿಳೆಯರು ಫ್ರೀ ಪ್ರಯಾಣ ಮಾಡುತ್ತಿದ್ದಾರೆ. ನಾನು ಈ ಹಿಂದೆ 7 ಕೆಜಿ ಅಕ್ಕಿ ಫ್ರೀಯಾಗಿ ಕೊಡುತ್ತಿದ್ದೆ ಎಂದಿದ್ದಾರೆ.
ಮೈಶುಗರ್ ಕಾರ್ಖಾನೆ ನಷ್ಟದಲ್ಲಿ ಇದೆ ಎಂದು ಚಲುವರಾಯಸ್ವಾಮಿ ಹೇಳಿದ್ದರು. ಕೂಡಲೇ 50 ಕೋಟಿ ರೂ. ಬಿಡುಗಡೆ ಮಾಡಿದೆ. ಅವರು 25 ಕೋಟಿ ರೂ. ಕೇಳಿದ್ದರು. ನಾನು 50 ಕೋಟಿ ರೂ. ನೀಡಿದೆ. ಹೊಸ ಕಾರ್ಖಾನೆ ಮಾಡಲು ಘೋಷಣೆ ಮಾಡಿದ್ದೇನೆ. ಮಣ್ಣಿನ ಮಕ್ಕಳು ಇದೇಲ್ಲಾ ಮಾಡಿದ್ರಾ? ಏನು ಮಾಡದೇ ಇದ್ದರು ಅವರು ಮಣ್ಣಿನ ಮಕ್ಕಳಾ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುತ್ತದೆ ಎಂಬುವುದು ಊಹಾಪೋಹ: ಪ್ರಹ್ಲಾದ್ ಜೋಶಿ
ಮಂಡ್ಯ ಗಂಡು ಮೆಟ್ಟಿನ ನೆಲ ಎಂದು ಚಲುವರಾಯಸ್ವಾಮಿಗೆ ಕೃಷಿ ಸಚಿವ ಸ್ಥಾನ ನೀಡಿದ್ದೇವೆ. ಚಲುವರಾಯಸ್ವಾಮಿ ಮೇಲೆ ರೈತರ ಮಕ್ಕಳು ಗೂಬೆ ಕೂರಿಸಲು ಹೋದರು. ಆದರೆ ಅದೇನು ಸಹ ಆಗಲಿಲ್ಲ. ರಾಜ್ಯದಲ್ಲಿ ಬರ ನಿರ್ವಹಣೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರ ಮೇಲೆ ಇದ್ದಕ್ಕಿದ್ದಂತೆ ಜೆಡಿಎಸ್ ಅವರಿಗೆ ಪ್ರೀತಿ ಬಂದಿದೆ. ಬಿಜೆಪಿ ಅವರು ಹೇಳುತ್ತಾರೆ ಜೆಡಿಎಸ್ ಅವರು ತಾಳ ಹಾಕುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಾರೆ. ಜೆಡಿಎಸ್ ಅವರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.