ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಶಂಕಿತ ಉಗ್ರ ಮದರಸದಲ್ಲಿ ತಲೆಮರೆಸಿಕೊಂಡಿರುವ ಶಂಕೆ: VHP
ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಉಗ್ರನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ. ಆದರೆ, ಶಂಕಿತ ಉಗ್ರ ಮದರಸಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದೆ ಎಂದು ವಿಎಚ್ಪಿ ಆರೋಪಿಸಿದೆ. ಅಲ್ಲದೆ, ರಾಜ್ಯದ ಮದರಸಗಳಿಗೆ ದಾಳಿ ಮಾಡುವಂತೆ ಆಗ್ರಹಿಸಿದೆ.
ಮಂಗಳೂರು, ಮಾ.10: ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಬಾಂಬ್ ಸ್ಪೋಟ (Rameshwaram Cafe Bomb Blast) ಪ್ರಕರಣದ ಶಂಕಿತ ಉಗ್ರನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ. ಆದರೆ, ಶಂಕಿತ ಉಗ್ರ ಮದರಸಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದೆ ಎಂದು ವಿಎಚ್ಪಿ (VHP) ಆರೋಪಿಸಿದೆ. ಅಲ್ಲದೆ, ರಾಜ್ಯದ ಮದರಸಗಳಿಗೆ ದಾಳಿ ಮಾಡುವಂತೆ ಆಗ್ರಹಿಸಿದೆ.
ಮಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್, ಶಂಕಿತ ಬಾಂಬರ್ ಭಟ್ಕಳಕ್ಕೆ ಬಂದಿರುವ ಮಾಹಿತಿ ಬಂದಿದೆ. ಹೀಗಾಗಿ ಭಟ್ಕಳದಲ್ಲಿರುವ ಎಲ್ಲಾ ಮದರಸಗಳಿಗೆ ದಾಳಿ ಮಾಡಿದರೆ ಬಾಂಬರ್ನ ಎಲ್ಲಾ ಮಾಹಿತಿ ಸಿಗುತ್ತದೆ ಎಂದರು.
ಶುಕ್ರವಾರ ದಿನ ಬಾಂಬ್ ಬ್ಲಾಸ್ಟ್ ಮಾಡಬೇಕಾದರೆ ಆತನ ಉದ್ದೇಶ ಸ್ಪಷ್ಟವಾಗಿತ್ತು. ರಾಮೇಶ್ವರಂ ಹೆಸರಿನ ಕೆಫೆಯನ್ನು ಟಾರ್ಗೆಟ್ ಮಾಡಿದ್ದಾನೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ಆ ಬಾಂಬರ್ ಬ್ಲಾಸ್ಟ್ ಮಾಡಿದ್ದಾನೆ. ಬಾಂಬರ್ ಬಳ್ಳಾರಿ, ಭಟ್ಕಳಕ್ಕೆ ಹೋಗಿರುವ ವಿಡಿಯೋವನ್ನು ರಾಷ್ಟ್ರೀಯ ತನಿಖಾ ದಳ, ಪೊಲೀಸರು ಆತನ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಿದ ಬಳಿಕ ಆತ ಮಸೀದಿಗೆ ಹೋಗಿ ಬಟ್ಟೆ ಬದಲಾಯಿಸಿರುವ ಮಾಹಿತಿ ಮಾಧ್ಯಮದ ಮೂಲಕ ಗೊತ್ತಾಗಿದೆ. ಈ ಮೂಲಕ ಮಸೀದಿ ಮದರಸಗಳಿಗೆ ಇವನ ಬಗ್ಗೆ ಗೊತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ಸಮುದ್ರ ಮಾರ್ಗವಾಗಿ ಶಂಕಿತರು ಪರಾರಿಯಾಗುವ ಸಾಧ್ಯತೆ, ಹೈ ಅಲರ್ಟ್
ಇಡೀ ದೇಶದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ಸಾಕಷ್ಟು ಮದರಸಗಳಿಗೆ ಸಂಪರ್ಕ ಇದ್ದ ಬಗ್ಗೆ NIA ದಾಖಲೆ ಬಿಡುಗಡೆ ಮಾಡಿದೆ. ಹೀಗಾಗಿ ಕರ್ನಾಟಕದ ಮದರಸಗಳಲ್ಲಿ ಈತ ಯಾಕಿರಬಾರದು? ಇಲ್ಲಿವರೆಗೂ ಮಸೀದಿ ಮದರಸಗಳಲ್ಲಿ ತನಿಖೆ ಆಗಿಲ್ಲ. ಅಲ್ಲಿಗೆ ಹೋಗಿ ವಿಚಾರಣೆ ಮಾಡಿಲ್ಲ. ಕರ್ನಾಟಕದ ಮದರಸಗಳಿಗೆ NIA ಅಧಿಕಾರಿಗಳು ದಾಳಿ ಮಾಡಲಿ ಎಂದು ಒತ್ತಾಯಿಸಿದರು.
ಇಡೀ ದೇಶದಲ್ಲಿ ಭಯೋತ್ಪಾದಕ ಕೃತ್ಯ ಆದಾಗ ಭಟ್ಕಳ, ಶಿವಮೊಗ್ಗ, ಮಂಗಳೂರಿಗೆ ನಂಟಿರುವುದು ಬಹಿರಂಗ ಆಗಿದೆ. ಮದರಸಗಳಲ್ಲಿ ಈ ರೀತಿಯ ಶಿಕ್ಷಣ ಕೊಡುತ್ತಿರುವುದರಿಂದ ಈ ರೀತಿ ಆಗುತ್ತಿದೆ. ರಾಷ್ಟ್ರ, ಹಿಂದೂ ವಿರೋಧಿ ಶಿಕ್ಷಣ ನೀಡಲಾಗುತ್ತಿದೆ. ಭಯೋತ್ಪಾದಕರು ಹುಟ್ಟುವುದೇ ಈ ರೀತಿಯ ಶಿಕ್ಷಣದ ಕಾರಣದಿಂದಾಗಿ. ಯಾಕೆ ಮದರಸಗಳಲ್ಲಿ ಈತನಿಗೆ ಆಶ್ರಯ ಕೊಟ್ಟಿರಬಾರದೆಂದು ಬಲವಾದ ಸಂಶಯವಿದೆ ಎಂದರು.
ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸಾಕಷ್ಟು ಮದರಸಗಳಿವೆ. ಉತ್ತರಪ್ರದೇಶದಲ್ಲಿ ಭಯೋತ್ಪಾದಕರ ತಾಣ ಎಂಬ ಕಾರಣಕ್ಕೆ ಮದರಸ ಒಡೆದು ಹಾಕಿದ್ದಾರೆ. ಕರ್ನಾಟಕ ಸರ್ಕಾರ ಒಡೆಯುವುದು ಬಿಡಿ ಮದರಸಗಳಿಗೆ ಹೋಗಿ ತನಿಖೆ ಮಾಡಲಿ. ವಿಚಾರಣೆ ಮಾಡಿದಾಗ ವಿಷಯ ತಿಳಿಯಬಹುದು ಎಂದರು.
ಮಂಗಳೂರು ಬಾಂಬ್ ಸ್ಪೋಟದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಇವರೆಲ್ಲಾ ತಂಡವಾಗಿ ಸಂಚು ರೂಪಿಸುತ್ತಿದ್ದಾರೆ. ಇದೆಲ್ಲಾ ಒಂದೇ ತಂಡದ ಕೃತ್ಯ. ಮಂಗಳೂರು ಬಾಂಬ್ ಸ್ಪೋಟಕ್ಕೂ ಬೆಂಗಳೂರು ಬಾಂಬ್ ಸ್ಪೋಟಕ್ಕೂ ಲಿಂಕ್ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ