
ಬೆಂಗಳೂರು, (ಜನವರಿ 19): ಕರ್ನಾಟಕ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ (Karnataka DGP Ramachandra rao) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ತವ್ಯದ ಸಮಯದಲ್ಲೇ ಬೆಂಗಳೂರಿನಲ್ಲಿರುವ ಡಿಜಿಪಿ ಕಚೇರಿಯಲ್ಲೇ ಮಹಿಳೆಯರ ಜೊತೆ ಡಾ.ರಾಮಚಂದ್ರರಾವ್ ರಾಸಲೀಲೆ ನಡೆಸಿದ್ದು, ಸೀಕ್ರೆಟ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆಯರನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಒಂದು ವರ್ಷದ ಹಿಂದಿನ ವಿಡಿಯೋ ಎಂದು ಹೇಳಲಾಗಿದ್ದು, ಇದೀಗ ವೈರಲ್ ಆಗಿದೆ. ಇದು ಪೊಲೀಸ್ ಇಲಾಖೆಯ ಶಿಸ್ತು, ಘನತೆ, ಗೌರವಕ್ಕೆ ಧಕ್ಕೆ ತರುವ ವಿಷಯ. ಕಚೇರಿಯ ವೇಳೆಯಲ್ಲಿ ಪೊಲೀಸ್ ವಸ್ತ್ರದಲ್ಲೇ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿ ಮನೆ ಗೇಟಿನಿಂದಲೇ ವಾಪ್ ಕಳುಹಿಸಿದ್ದಾರೆ. ಮತ್ತೊಂದೆಡೆ ಈ ರಾಸಲೀಲೆ ವಿಡಿಯೋ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಡಿಜಿಪಿ ರಾಮಚಂದ್ರ ರಾವ್ಗೆ ಸಂಕಷ್ಟ ಎದುರಾಗಿದೆ.
ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನನಗೆ ಮುಂಜಾನೆ ಈ ವಿಚಾರ ಗೊತ್ತಾಗಿದೆ.
ವಿಚಾರಣೆ ಮಾಡಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ.ಎಷ್ಟೇ ಎತ್ತರ ವ್ಯಕ್ತಿಯಾದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಖುದ್ದು ರಾಮಚಂದ್ರ ರಾವ್ ಅವರು ಗೃಹ ಸಚಿವ ಡಾ ಜಿ ಪರಮೇಸ್ವರ್ ನಿವಾಸಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ರಾಮಚಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಇದರ ಬಗ್ಗೆ ತನಿಖೆ ಆಗಬೇಕು.ಗೃಹ ಸಚಿವರಿಗೆ ಮಾಹಿತಿ ನೀಡಲು ಬಂದಿದ್ದೇನೆ ಎಂದು ತಿಳಿಸಿದರು.
ಸಮವಸ್ತ್ರದಲ್ಲೇ ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋ ಬಯಲಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಆದರೆ, ಪರಮೇಶ್ವರ್ ಅವರು ರಾಮಚಂದ್ರ ರಾವ್ ಅವರನ್ನು ಭೇಟಿಗೆ ನಿರಾಕರಿಸಿ್ದು, ಮನೆಯ ಗೇಟ್‌ನಿಂದಲೇ ವಾಪಸ್ ಕಳಿಸಿದ್ದಾರೆ.
ಈ ಬಗ್ಗೆ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಘನಕಾರ್ಯ ಅಕ್ಷಮ್ಯ ಅಪರಾಧ. ರಾಮಚಂದ್ರ ರಾವ್ ಇಡೀ ಪೊಲೀಸ್ ಇಲಾಖೆಗೆ ಕಳಂಕ ಮೆತ್ತುವ ಕಾರ್ಯವೆಸಗಿದ್ದಾರೆ. ಹಿಂದೆ ಅವರ ಹೆಸರು ಮತ್ತು ಸ್ಥಾನದ ದುರುಪಯೋಗ ಮಾಡಿಕೊಂಡು ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ನಡೆದಿದ್ದಾಗ ಈ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಇದೀಗ ಪ್ರಕಟವಾಗಿರುವ ಈ ಪೊಲೀಸ್ ಅಧಿಕಾರಿಯ ಘನಂಧಾರಿ ಕಾರ್ಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು. ಮತ್ತೆ ಕಡ್ಡಾಯ ರಜೆ ಮೇಲೆ ಕಳಿಸಿ ಕೈ ತೊಳೆದುಕೊಳ್ಳುವುದು ಸರ್ಕಾರಕ್ಕೆ ಭೂಷಣವಲ್ಲ ಎಂದು ಸಲಹೆ ನೀಡಿದ್ದಾರೆ.
ಸಮವಸ್ತ್ರದಲ್ಲಿಯೇ ತನ್ನ ಕಚೇರಿಯಲ್ಲಿಯೇ ಈ ಹಿರಿಯ ಅಧಿಕಾರಿ ಮಾಡಿರುವ ಕೃತ್ಯ ಪೊಲೀಸ ಇಲಾಖೆಯನ್ನೇ ಸಂಶಯದಿಂದ ಅನುಮಾನದಿಂದ ನೋಡುವಂತಾಗಿದೆ. ಐಪಿಎಸ್ ಎಂಬ ಅತ್ಯಂತ ಜವಾಬ್ದಾರಿಯುತ ಹೆಸರಿಗೆ ಈ ವ್ಯಕ್ತಿ ಇಂದು ಅಪಚಾರ ವೆಸಗಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕಳಿಸಬೇಕೆಂದರೆ ಸರ್ಕಾರ ಈ ಬಗ್ಗೆ ತುರ್ತು ಮತ್ತು ಪರಿಣಾಮಕಾರಿ ಕ್ರಮವನ್ನು ಘೋಷಿಸಬೇಕು. ಇಲ್ಲದಿದ್ದರೆ ಇಡೀ ಆಡಳಿತವೇ ಕಡ್ಡಾಯ ರಜೆ ಮೇಲೆ ಹೋದಂತೆ ಜನ ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ ರಾಸಲೀಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪೊಲೀಸರ ನಡೆಯಿಂದಲೇ ಮೇಲಿಂದ ಮೇಲೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಘಟನೆಗಳು ನಡೆಯುತ್ತಿವೆ. ಇದೀಗ ರಾಮಂಚಂದ್ರ ರಾಸಲೀಲೆ ಸಂಬಂಧ ಸಿಎಂ ಹಾಗೂ ಗೃಹ ಸಚಿವರು ಕೆಂಡಾಮಂಡಲರಾಗುದ್ದಾರೆ. ಹೀಗಾಗಿ ಡಿಜಿಪಿ ರಾಮಚಂದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:01 pm, Mon, 19 January 26