ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ: ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ

|

Updated on: Jun 27, 2024 | 11:26 AM

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪಿಎಂ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಪ್ರಧಾನಿ ಭೇಟಿ ವೇಳೆ ಅವರು ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ.

ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ: ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ & ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು, ಜೂನ್ 27: ಜೂನ್ 29ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದೆ. ಪ್ರಧಾನಿ ಹಾಗೂ ಕೇಂದ್ರದ ಹಲವು ಸಚಿವರ ಜತೆ ಮಾತುಕತೆ ನಡೆಸಲಿದ್ದೇನೆ. ಇದಕ್ಕಾಗಿ ಇಂದೇ ದೆಹಲಿಗೆ ತೆರಳಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೆಹಲಿಗೆ ತೆರಳುವ ಮುನ್ನ ಇಂದು ರಾಜ್ಯದ ಸಂಸದರ ಜೊತೆ ಸಭೆ ನಡೆಸುತ್ತೇನೆ. ರಾಜ್ಯಕ್ಕೆ ಬರಬೇಕಿರುವ ಅನುದಾನ, ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಲಿದ್ದೇನೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನುಷ್ಠಾನಗೊಳಿಸಬೇಕಿರುವ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರ ಜತೆ ಚರ್ಚಿಸಲಿದ್ದೇನೆ. ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಬರಬೇಕಿರುವ ಅನುದಾನದ ಬಗ್ಗೆಯೂ ಪ್ರಸ್ತಾಪಿಸಲಿದ್ದೇನೆ. ಇದಕ್ಕಾಗಿ ಸಂಸದರ, ರಾಜ್ಯಸಭಾ ಸದಸ್ಯರ ಜತೆ ಸಭೆ ನಡೆಸಿ ಮಾಹಿತಿ ಕಲೆ ಹಾಕಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವಿವಿಧ ಇಲಾಖೆಗಳ ಸಚಿವರೂ ನನ್ನ ಜತೆ ದೆಹಲಿಗೆ ಬರಲಿದ್ದಾರೆ. ಅಲ್ಲಿ ಭೂಸಾರಿಗೆ ಸಚಿವರನ್ನು ಭೇಟಿಯಾಗಲಿದ್ದೇವೆ. ಗೃಹ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದೇವೆ. ಹಣಕಾಸು ಸಚಿವರನ್ನೂ ಭೇಟಿಯಾಗಲು ಪ್ರಯತ್ನಿಸುತ್ತೇವೆ. ಪ್ರಧಾನಿ ಹಾಗೂ ಗಡ್ಕರಿ ಭೇಟಿಗೆ ಸಮಯ ನಿಗದಿಯಾಗಿದೆ. ಗೃಹ ಸಚಿವರ ಭೇಟಿಗೆ ಇನ್ನಷ್ಟೇ ಸಮಯ ನಿಗದಿಯಾಗಬೇಕಿದೆ ಎಂದು ಅವರು ಮಾಹಿತಿ ನೀಡಿದರು. ರೈಲ್ವೆ ಹಾಗೂ ನೀರಾವರಿ ಸಚಿವರನ್ನೂ ಭೇಟಿಯಾಗಲಿದ್ದೇವೆ ಎಂದರು.

ಕೇಂದ್ರ ಬಜೆಟ್​​​ನಲ್ಲಿ ಕರ್ನಾಟಕದ ಬೇಡಿಕೆಗಳೇನು?

ಕೇಂದ್ರದ ನೂತನ ಎನ್​ಡಿಎ ಸರ್ಕಾರದ ಮೊದಲ ಬಜೆಟ್​​ನಲ್ಲಿ ರಾಜ್ಯಕ್ಕೆ ಏನೇನು ಕೇಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಖುದ್ದು ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಚಿವ ಕೃಷ್ಣಬೈರೇಗೌಡರ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ. ಏನೇನು ಆಗಬೇಕೆಂಬ ಹೇಳಿಕೆ ರೆಕಾರ್ಡ್ ಮಾಡಿ ಕಳುಹಿಸಿದ್ದೇನೆ ಎಂದರು.

ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಕೆಯುಡಬ್ಲೂೃಜೆ, ಪತ್ರಕರ್ತರ ಬೇಡಿಕೆ ಈಡೇರಿಸುವಂತೆ ಸಿದ್ದರಾಮಯ್ಯಗೆ ಮನವಿ

ರಾಹುಲ್ ಗಾಂಧಿ ಸಮರ್ಥ ವಿಪಕ್ಷ ನಾಯಕ: ಸಿದ್ದರಾಮಯ್ಯ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿದ್ದಾರೆ. ರಾಹುಲ್ ಗಾಂಧಿ ಚುನಾವಣೆಗೂ ಮುನ್ನ ಇಡೀ ದೇಶ ಸುತ್ತಿದ್ದಾರೆ. ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಅದನ್ನವರು ಸಂಸತ್​​ನಲ್ಲಿ ಸಮರ್ಥವಾಗಿ ಮಂಡಿಸಲಿದ್ದಾರೆ. ಸಮರ್ಥ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Thu, 27 June 24