ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ: 2 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು

ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಹೀಗಾಗಿ ಅವರ ಇಂದಿನ ಪ್ರವಾಸಗಳು ರದ್ದಾಗಿವೆ. ಪೂರ್ವ ನಿಗದಿಯಂತೆ ಅವರು ಇಂದು ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆ ಪ್ರವಾಸ ಕೈಗೊಳ್ಳಬೇಕಿತ್ತು. ಸದ್ಯ ಪ್ರವಾಸ ರದ್ದಾಗಿದ್ದು, ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ: 2 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು
ಸಿಎಂ ಸಿದ್ದರಾಮಯ್ಯ
Edited By:

Updated on: Feb 02, 2025 | 12:40 PM

ಬೆಂಗಳೂರು, ಫೆಬ್ರವರಿ 2: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿ ನೋವಿನ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಹೀಗಾಗಿ, ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ. ಚಿಕ್ಕಬಳ್ಳಾಪುರದ ಹೊಸೂರು ಗ್ರಾಮಕ್ಕೆ ಇಂದು ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಹೀಗಾಗಿ ಬಿಗಿ ಭದ್ರತೆ ಕೂಡ ಮಾಡಲಾಗಿತ್ತು. ಆದರೆ ಇದೀಗ ದಿಢೀರ್ ಆಗಿ ಸಿದ್ದರಾಮಯ್ಯ ಭೇಟಿ ರದ್ದಾಗಿದೆ.

ಎರಡು ದಿನ ವಿಶ್ರಾಂತಿಗೆ ವೈದ್ಯರ ಸೂಚನೆ

ಸಿಎಂ ಸಿದ್ದರಾಮಯ್ಯಗೆ ಎಡಗಾಲಿನ ಮಂಡಿ ನೋವು ಹೆಚ್ಚಾಗಿದೆ. ಹೀಗಾಗಿ ಸದ್ಯ ಅವರು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಪತ್ರೆಯಲ್ಲಿ ಡಾ. ಸತ್ಯನಾರಾಯಣ ಅವರು ಸಿಎಂ ಸಿದ್ದರಾಮಯ್ಯರನ್ನು ತಪಾಸಣೆ ನಡೆಸಿದ್ದಾರೆ. ಈ ಸಿದ್ದರಾಮಯ್ಯ ಹಿಂದೆ ಲೆಗಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದೇ ಜಾಗದಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 2 ದಿನ ಪ್ರಯಾಣ ಮಾಡದೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಡಗಾಲಿನ ಎಕ್ಸ್ ರೇ ಮಾಡಿದ ವೈದ್ಯರು, ವರದಿಯಲ್ಲಿ ಎಲ್ಲವೂ ಸಹಜವಾಗಿಯೇ ಇದೆ ಎಂದು ಔಷಧ ನೀಡಿದ್ದಾರೆ. ಜತೆಗೆ, ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂದು ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 500 ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಬಂದೋಬಸ್ತ್ ಮಾಡಲಾಗಿತ್ತು. ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ನೇತೃತ್ವದಲ್ಲಿ 1 ಎಸ್ಪಿ, 1 ಎಎಸ್ಪಿ, 4 ಡಿ.ವೈ.ಎಸ್ಪಿ, 20 ಸಿ.ಪಿ.ಐ, 2 ಕೆ.ಎಸ್.ಆರ್.ಪಿ ಸೇರಿದಂತೆ 500 ಜನ ಪೊಲೀಸರಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಇದೀಗ ಸಿಎಂ ಭೇಟಿ ದಿಢೀರಾಗಿ ರದ್ದಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ: ರಾಜೀನಾಮೆ ಬೆನ್ನಲ್ಲೇ ಬಿಆರ್ ಪಾಟೀಲ್ ಅಸಮಾಧಾನ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Sun, 2 February 25