ಮೋದಿ ದಕ್ಷಿಣ ಭಾರತೀಯರ ಬಗ್ಗೆ ವಿಷ ಉಗುಳುತ್ತಾರೆಂದ ಸಿದ್ದರಾಮಯ್ಯ ತಿರುಗುಬಾಣವಾದ ‘ಕೈ’ ನಾಯಕರ ಹೇಳಿಕೆಗಳು!

|

Updated on: May 17, 2024 | 11:46 AM

ದಕ್ಷಿಣ ರಾಜ್ಯಗಳ ಚುನಾವಣೆಗಳು ಮುಗಿದ ಕಾರಣ, ಭಾರತದ ಕೃತಘ್ನ ಪ್ರಧಾನಿ ಈಗ ದಕ್ಷಿಣದ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ದಕ್ಷಿಣ ಮತ್ತು ಉತ್ತರ ಭಾರತೀಯರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯಗೆ ಅವರದೇ ಪಕ್ಷದ ನಾಯಕರಾದ ಡಿಕೆ ಸುರೇಶ್, ಪ್ರಿಯಾಂಕ್ ಖರ್ಗೆ ಹೇಳಿಕೆಗಳು ತಿರುಗುಬಾಣವಾಗಿವೆ. ಅದೇನೆಂಬುದನ್ನು ತಿಳಿಯಲು ಮುಂದೆ ಓದಿ.

ಮೋದಿ ದಕ್ಷಿಣ ಭಾರತೀಯರ ಬಗ್ಗೆ ವಿಷ ಉಗುಳುತ್ತಾರೆಂದ ಸಿದ್ದರಾಮಯ್ಯ ತಿರುಗುಬಾಣವಾದ ‘ಕೈ’ ನಾಯಕರ ಹೇಳಿಕೆಗಳು!
ಸಿಎಂ ಸಿದ್ದರಾಮಯ್ಯ & ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು, ಮೇ 17: ದಕ್ಷಿಣ ಭಾರತದಲ್ಲಿ ಲೋಕಸಭೆ ಚುನಾವಣೆಯ (Lok Sabha Elections) ಮತದಾನ ಮುಗಿದ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಈಗ ಇಲ್ಲಿನವರ ಬಗ್ಗೆ ವಿಷ ಉಗುಳುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯಗೆ (Siddaramaiah) ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಪಕ್ಷದ ನಾಯಕರ ಹೇಳಿಕೆಗಳೇ ತಿರುಗುಬಾಣಗಳಾಗಿ ಬರುತ್ತಿವೆ. ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಉತ್ತರ ಭಾರತೀಯರು, ಉತ್ತರ ಪ್ರದೇಶದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿವೆ ಎಂಬ ಪ್ರಧಾನಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಆದರೆ, ಅವರಿಗೆ ಕಾಂಗ್ರೆಸ್ ನಾಯಕರು ಹಿಂದೆ ನೀಡಿದ್ದ ಹೇಳಿಕೆಗಳೇ ತಿರುಗೇಟುಗಳಾಗಿ ಬರುತ್ತಿವೆ.

ಸಿದ್ದರಾಮಯ್ಯ ಎಕ್ಸ್​ ಸಂದೇಶ


ದಕ್ಷಿಣ ರಾಜ್ಯಗಳ ಚುನಾವಣೆಗಳು ಮುಗಿದ ಕಾರಣ, ಭಾರತದ ಕೃತಘ್ನ ಪ್ರಧಾನಿ ಈಗ ದಕ್ಷಿಣದ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ದಕ್ಷಿಣ ಮತ್ತು ಉತ್ತರ ಭಾರತೀಯರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಕರ್ನಾಟಕವನ್ನು ಭಾರತದ ಮಗಳು ಎಂದು ಪರಿಗಣಿಸುತ್ತೇವೆ. ಭಾರತ ಎಂದಿಗೂ ಯಾರಿಗೂ ತಾರತಮ್ಯ ಮಾಡಿಲ್ಲ. ಆದರೆ ಮೋದಿಯಂತಹ ಜನರು ವಿಷವನ್ನು ಉಗುಳುತ್ತಾರೆ. ನಾವು ಪ್ರತಿ ರಾಜ್ಯದ ಜನರೊಂದಿಗೆ ಸಹಜೀವನದ ಸಂಬಂಧವನ್ನು ಹೊಂದಿದ್ದೇವೆ ಮತ್ತು ಅದರ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಸಿದ್ದರಾಮಯ್ಯ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೆ ಕೆಲವರು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೇಶ ವಿಭಜನೆ ಬಗ್ಗೆ ನೀಡಿರುವ ಹೇಳಿಕೆ ಹಾಗೂ ಈ ಹಿಂದೆ ಪ್ರಿಯಾಂಕ್ ಖರ್ಗೆ ಉತ್ತರ ಭಾರತದವರ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಪತ್ರಿಕಾ ವರದಿಗಳ ತುಣುಕನ್ನು ಪ್ರತಿಕ್ರಿಯೆಯಾಗಿ ಲಗತ್ತಿಸಿದ್ದಾರೆ.

ಇದನ್ನೂ ಓದಿ: ‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ ವಿರುದ್ಧ ಬಿಜೆಪಿ ಹೋರಾಟ: ಯುಟರ್ನ್ ಹೊಡೆದ್ರಾ ಡಿಕೆ ಸುರೇಶ್?

‘‘ನಾನು ಉದ್ಯೋಗಕ್ಕಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದೇನೆ ಎಂದು ಯಾವುದೇ ಕನ್ನಡಿಗ ಹೇಳುವುದನ್ನು ನೀವು ಕೇಳಿದ್ದೀರಾ? ಕರ್ನಾಟಕದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದ ಎಷ್ಟು ಜನರಿದ್ದಾರೆ ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ. ಪರಿಸರ ವ್ಯವಸ್ಥೆಯಿಂದಾಗಿ ಅವರು ಇಲ್ಲಿಗೆ ಬರುತ್ತಾರೆ. ದಕ್ಷಿಣ ಭಾರತಕ್ಕೆ ಬಂದು ಜೀವನೋಪಾಯಕ್ಕೆ ಸಂಪಾದಿಸಬಹುದು ಎಂದು ಹಿಂದಿಯ ಹೃದಯಭಾಗದ ಜನ ಭಾವಿಸುತ್ತಾರೆ. ದಕ್ಷಿಣದ ಯಾರೊಬ್ಬರೂ ಹಿಂದಿಯ ಹೃದಯಭಾಗಕ್ಕೆ ಹೋಗಿ ಅಲ್ಲಿನ ಸಾಮಾಜಿಕ ಮೂಲಸೌಕರ್ಯದಿಂದಾಗಿ ಜೀವನೋಪಾಯವನ್ನು ಗಳಿಸಬಹುದು ಎಂದು ಭಾವಿಸುವುದಿಲ್ಲ’’ ಎಂದು ಪ್ರಿಯಾಂಕ್ ಖರ್ಗೆ ಈ ಹಿಂದೆ ಹೇಳಿದ್ದು ವಿವಾದಕ್ಕೀಡಾಗಿತ್ತು.

ಏನು ಹೇಳಿದ್ದರು ಮೋದಿ?

‘ಇಂಡಿಯಾ ಮೈತ್ರಿಕೂಟದಲ್ಲಿರುವ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್​ನ ದಕ್ಷಿಣ ಭಾರತದ ನಾಯಕರು ಉತ್ತರ ಭಾರತೀಯರು ಮತ್ತು ಉತ್ತರ ಪ್ರದೇಶದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವರ ಒಕ್ಕೂಟದ ನಾಯಕರು ಸನಾತನ ಧರ್ಮವನ್ನು ಟೀಕಿಸುತ್ತಾರೆ. ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳಾದ ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಡಪಕ್ಷಗಳು, ಕರ್ನಾಟಕದಲ್ಲಿ ಕಾಂಗ್ರೆಸ್​​​ನವರು ಉತ್ತರ ಪ್ರದೇಶ ಹಾಗೂ ತೆಲಂಗಾಣ ಜನರ ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡುತ್ತಿದ್ದಾರೆ. ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಆ ಮೈತ್ರಿಕೂಟದ ನಾಯಕರಿಗೆ ನೀವು ಮತ ​​ಹಾಕುತ್ತೀರಾ’ ಎಂದು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಮೋದಿ ಪ್ರಶ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ