Mahadev Prakash: ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕೊವಿಡ್​ನಿಂದ ನಿಧನ

Mahadev Prakash: ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕೊವಿಡ್​ನಿಂದ ನಿಧನ
ಮಹಾದೇವ್ ಪ್ರಸಾದ್

Mahadev Prakash Death: ಈ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಸೇವೆ ಸಲ್ಲಿಸಿದ್ದರು. ಆನಂತರ ಅವರು ಮಾಧ್ಯಮ ಸಲಹೆಗಾರ ಹುದ್ದೆಗ ರಾಜೀನಾಮೆ ಸಲ್ಲಿಸಿದ್ದರು.

guruganesh bhat

|

May 14, 2021 | 5:44 PM

ಬೆಂಗಳೂರು: ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ (65) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 10 ದಿನದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಈ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಸೇವೆ ಸಲ್ಲಿಸಿದ್ದರು. ಆನಂತರ ಅವರು ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. 1975ರ ಅಕ್ಟೋಬರ್ 15ರಂದು “ಲೋಕವಾಣಿ” ದಿನ ಪತ್ರಿಕೆಯ ಮೂಲಕ ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ರು. ಜತೆಗೆ ಮುಂದಿನ ದಿನಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಮತ್ತು ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದರು.

2020ನೇ ಸಾಲಿನ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರಿಗೆ ಕೊಡಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಮಾಹಿತಿ ಪಡೆದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯಪೂರ್ವಕವಾಗಿ ನಿರಾಕರಿಸಲು ನಿರ್ಧರಿಸಿದ್ದರು. ಈ ಬಗ್ಗೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಫೇಸ್​ಬುಕ್​ ಪೋಸ್ಟ್​ನ ಮರು ಓದು ನಿಮಗಾಗಿ.. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡದ ಒಂದು ಪ್ರತಿಷ್ಠಿತ ಹಾಗೂ ಹೆಮ್ಮೆಯ ಪ್ರಶಸ್ತಿ. ಕನ್ನಡ ಪತ್ರಿಕೋದ್ಯಮದಲ್ಲಿ 46 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದೇನೆ. ಸಂಪಾದಕನಾಗಿ, ಅಂಕಣಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ಮುದ್ರಣ ಮತ್ತ ದೃಶ್ಯ ಮಾಧ್ಯಮಗಳಲ್ಲಿ ನನ್ನ ಇರುವಿಕೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶನ ಮಾಡಿದ್ದೇನೆ. ಇದನ್ನು ಪರಿಗಣಿಸಿ ಗೌರಾನ್ವಿತ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪನವರು ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ.

ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವ ನಾನು ಈ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ನನ್ನ ಭಾವನೆ. ಮುಖ್ಯಮಂತ್ರಿಗಳು ನನ್ನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿದ್ದರೂ ಅದಕ್ಕೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಗುರಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದೇನೆ. ಇದನ್ನು ಅಹಂಕಾರ ಎಂದು ಯಾರೂ ಪರಿಗಣಿಸಬೇಕಿಲ್ಲ. ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು.

ಅದೇನೇ ಇರಲಿ 1975ರ ಅಕ್ಟೋಬರ್ 15ರಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಆರಂಭಿಸಿದ್ದ “ಲೋಕವಾಣಿ” ದಿನ ಪತ್ರಿಕೆಯ ಮೂಲಕ ನನ್ನ ಪತ್ರಿಕೋದ್ಯಮ ಜೀವನ ಆರಂಭಿಸಿದೆ‌. ಸದ್ಯ ಕಳೆದ ಹದಿನಾರು ವರ್ಷಗಳಿಂದ _”ಭಾನುವಾರ” ಎನ್ನುವ ನಿಯತಕಾಲಿಕದ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ನಿತಕಾಲಿಕ ಕನ್ನಡದ ಒಂದು ಪ್ರತಿಷ್ಠಿತ ನಿಯತಕಾಲಿಕವಾಗಿ ಹೆಸರು ಮಾಡಿದೆ. ಜೊತೆಗೆ ಕಳೆದ ಒಂಭತ್ತು ವರ್ಷಗಳಿಂದ ಕನ್ನಡದ ಹೆಸರಾಂತ ದೈನಿಕ ” ವಿಜಯ ಕರ್ನಾಟಕ”ದಲ್ಲಿ “ಹೊರಳು ನೋಟ” ಎನ್ನುವ ಹೆಸರಿನ ಅಂಕಣ ಬರೆಯುತ್ತಿದ್ದೇನೆ.

ವರ್ತಮಾನದ ರಾಜಕೀಯ ಘಟನಾವಳಿಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಈ ಅಂಕಣ ದೊಡ್ಡ ಪ್ರಮಾಣದಲ್ಲಿ ಓದುಗರನ್ನು ತಲುಪಿದೆ. ಈ ಎಲ್ಲಾ ಅಂಕಣಗಳ ಒಂಭೈನೂರು ಪುಟಗಳ ಸಂಕಲನ “ಹೊರಳು ನೋಟ” ಎನ್ನುವ ಹೆಸರಿನಲ್ಲಿ ಪ್ರಕಟಗೊಂಡು ಸಾಕಷ್ಟು ಓದುಗರ ಗಮನ ಸೆಳೆದಿದೆ. ಇದರ ಜೊತೆಗೆ ಕರ್ನಾಟಕದ ಸ್ವಾತಂತ್ರ್ಯ ಪೂರ್ವ ರಾಜಕೀಯ ಇತಿಹಾಸ ಕುರಿತ ” ಆರಂಕುಶಮಿಟ್ಟೊಡಂ ನೆನೆವುದನ್ನ ಮನಂ ಕರ್ನಾಟಕಮಂ” ಕೃತಿ ಐಬಿಎಚ್ ಪ್ರಕಾಶನದಿಂದ ಪ್ರಕಟಗೊಂಡು ದಾಖಲೆ ಸಂಖ್ಯೆಯಲ್ಲಿ ಮಾರಾಡ ಆಗಿದೆ.

ಇದರ ಜೊತೆಗೆ “ಸದನದಲ್ಲಿ ದೇವರಾಜ ಅರಸು” ಕೃತಿ ರಚಿಸಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ 78ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಹೊರತಂದ “ದಣಿವರಿಯದ ಧೀಮಂತ” ಮುಖ್ಯಮಂತ್ರಿಗಳ ಒಂದು ವರ್ಷದ ಆಡಳಿತದ ಸಂದರ್ಭದಲ್ಲಿ ಸಿದ್ಧಪಡಿಸಿದ “ಪುಟಕ್ಕಿಟ್ಟ ಚಿನ್ನ” ಕೃತಿಗಳ ಪ್ರಧಾನ ಸಂಪಾದಕ‌. ನನ್ನ “ಭಾನುವಾರ” ಮಾಸಿಕದಲ್ಲಿ ಪ್ರಕಟಗೊಂಡ ಸಂಪಾದಕೀಯಗಳ ಸಂಕಲನ “ಮಾಣಿಕ್ಯದ ದೀಪ್ತಿ” -“ಮುತ್ತಿನ ಹಾರ”-” ಸ್ಪಟಿಕದ ಶಲಾಕೆ” ಇನ್ನೂ ಮುಂತಾದ ಶಿರೋನಾಮೆಯ ಆರು ಸಂಪುಟಗಳು ಸದ್ಯದಲ್ಲಿಯೇ ಪ್ರಕಾಶನಗೊಳ್ಳಲಿವೆ.

ರಾಜ್ಯೋತ್ಸವ ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿ ಆಗಬೇಕೇ ಹೊರತು ಮಾರಕ ಆಗಬಾರದು ಅನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರವನ್ನು ಯಾರೂ ಅಹಂಕಾರ ಎಂದು ಭಾವಿಸಬಾರದು ಎನ್ನುವುದೇ ನನ್ನ ವಿನಮ್ರ ವಿನಂತಿ. -ಮಹಾದೇವ ಪ್ರಕಾಶ್, ರಾಜಕೀಯ ವಿಶ್ಲೇಷಕರು ಮತ್ತು ಅಂಕಣಕಾರ

ಇದನ್ನೂ ಓದಿ: ಇಪ್ಪತ್ತು ವರ್ಷಗಳ ಕಾಲ ಬೀಗ ಹಾಕಿದ್ದ ಕೋಲಾರದ ಆಸ್ಪತ್ರೆ ಪುನರಾರಂಭಕ್ಕೆ ಸಮ್ಮತಿ; ಕೊವಿಡ್​ ಸೆಂಟರ್​ ಆಗಿ ಪರಿವರ್ತನೆ

ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ್ದ ಪ್ರಖ್ಯಾತ ಪ್ರಸೂತಿ ತಜ್ಞೆ ಡಾ.ಎಸ್.ಕೆ.ಭಂಡಾರಿ ಕೊವಿಡ್​ನಿಂದ ನಿಧನ

(Karnataka CM’s ex media adviser Mahadev Prakash died due to Covid Pandemic in Bengaluru)

Follow us on

Related Stories

Most Read Stories

Click on your DTH Provider to Add TV9 Kannada