ಉಡುಪಿ: ಕೊರೊನಾ ಲಾಕ್ಡೌನ್ನಿಂದಾಗಿ ಅಲ್ಪ ಸ್ವಲ್ಪ ಮೀನುಗಾರಿಕೆಯೊಂದಿಗೆ ಈ ವರ್ಷದ ಮೀನುಗಾರಿಕಾ ಋತು ಮುಕ್ತಾಯಗೊಂಡಿದೆ. ಸದ್ಯಕ್ಕೀಗ ಸಮುದ್ರ ಮೀನುಗಾರಿಕೆಗೆ ನಿಷೇಧವಿದ್ದು, ನಾಡದೋಣಿ ಮೀನುಗಾರಿಕೆ ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ ವರ್ಷದಿಂದ ವರ್ಷಕ್ಕೆ ಮತ್ಸ್ಯ ಬೇಟೆ ಕಡಿಮೆಯಾಗುತ್ತಿದ್ದು, ಸಾಕಷ್ಟು ಮೀನುಗಾರಿಕೆ ನಡೆದರೂ ಕೂಡ ಸಾಲದ ಹೊರೆಯಿಂದ ಮೀನುಗಾರರು ಮುಕ್ತವಾಗಿಲ್ಲ. ಈ ಮೀನುಗಾರಿಕಾ ಋತು ಮಾರಾಟಗಾರ ಮಹಿಳೆಯರನ್ನು ಮತ್ತು ಮೀನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದು, ಸದ್ಯ ಕರಾವಳಿ ಭಾಗದ ಮೀನುಗಾರಿಕೆಯನ್ನೇ ಆಧಾರವಾಗಿಸಿಕೊಂಡ ಜನರು ಆತಂಕಕ್ಕೆ ಗುರಿಯಾಗಿದ್ದಾರೆ.
ಕರಾವಳಿಯ ಆರ್ಥಿಕತೆಗೆ ಮೀನುಗಾರಿಕೆಯೇ ಬೆನ್ನೆಲುಬು. ಆದರೆ ಕಳೆದ ಏಳು ವರ್ಷಗಳ ಮೀನುಗಾರಿಕಾ ಋತುಗಳಲ್ಲಿ ಮೀನು ಉತ್ಪಾದನೆಯ ಅಂಕಿ ಅಂಶಗಳ ಪ್ರಕಾರ ಈ ಬಾರಿ ಕನಿಷ್ಠ ಪ್ರಮಾಣದಲ್ಲಿ ಮೀನು ಲಭ್ಯವಾಗಿದೆ. ಅದೇ ರೀತಿ ಕನಿಷ್ಠ ಆದಾಯ ಬಂದಿದೆ. ಆದರೆ ಈ ಮೀನುಗಾರಿಕಾ ಋತುವಿನಲ್ಲಿ ಕಳೆದ ವರ್ಷಕ್ಕಿಂತ ಮತ್ಸ್ಯ ಉತ್ಪಾದನೆಯಲ್ಲಿ ತುಸು ಚೇತರಿಕೆ ಕಾಣಿಸಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ಮೂಲವಾಗಿರುವ ಮತ್ಸ್ಯೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದೆ. ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಒಂದೆಡೆಯಾದರೆ, ಹವಾಮಾನ ವೈಪರೀತ್ಯ ಇನ್ನೊಂದೆಡೆ. ಇವುಗಳ ಜೊತೆಗೆ ಕೊವಿಡ್ ಸೋಂಕು ಕೂಡ ಮತ್ಸ್ಯ ಉದ್ಯಮಕ್ಕೆ ಏಟು ಕೊಟ್ಟಿದೆ. ಇದರಿಂದ ಮೀನುಗಾರಿಕೆ ಹಾಗೂ ಅವಲಂಭಿತ ಉದ್ಯಮಗಳ ಆದಾಯಕ್ಕೆ ಹಿನ್ನಡೆಯಾಗಿದೆ. ಕಳೆದ ಜೂನ್‌ನಿಂದ ಈ ವರ್ಷ ಮೇ ವರೆಗೆ ಜಿಲ್ಲೆಯಲ್ಲಿ 1,21,775 ಟನ್ ಮತ್ಸ್ಯ ಬೇಟೆಯಾಗಿದೆ. ಒಂದು ವರ್ಷದಲ್ಲಿ 1,29,390 ಲಕ್ಷ ರೂಪಾಯಿ ಮೌಲ್ಯದ ವ್ಯವಹಾರ ನಡೆದಿದೆ.
ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೀನುಗಾರಿಕೆ ನಡೆದಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹವಾಮಾನ ವೈಪರೀತ್ಯದ ವೇಳೆ ಮಾತ್ರ ಕಡಲಿಗಿಳಿಯುವುದಕ್ಕೆ ನಿಷೇಧವಿತ್ತು. ಉಳಿದಂತೆ ಮೀನುಗಾರಿಕೆಗೆ ಯಾವುದೇ ನಿಷೇಧವಿರಲಿಲ್ಲ. ಆದರೆ ಕಳೆದ ವರ್ಷಕ್ಕಿಂತ 18,918 ಟನ್ ಮಾತ್ರ ಜಾಸ್ತಿ ಮೀನು ಹಿಡಿಯಲಾಗಿದೆ. ಆದಾಯ ಪ್ರಮಾಣದಲ್ಲಿ 27,845.31 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಕಳೆದ ಹಾಗೂ ಈ ಮೀನುಗಾರಿಕಾ ಋತುಗಳನ್ನು ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಕಡಿಮೆಯೇ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಗಣೇಶ್ ತಿಳಿಸಿದ್ದಾರೆ.
ಈ ಋತುವಿನಲ್ಲಿ ಕುಂದಾಪುರದ ಕರವಾಳಿಯಲ್ಲಿ ಕನಿಷ್ಠ ಮೀನುಗಾರಿಕೆ ನಡೆದಿದೆ. ಏಷ್ಯಾದ ಅತೀ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಮಲ್ಪೆಯಲ್ಲಿಯೂ ಮೀನು ಹಿಡಿದಿರುವುದು ಮತ್ತು ಆದಾಯದಲ್ಲಿ ಇಳಿಕೆಯಾಗಿದೆ. ಈ ಬಾರಿ 1,08,900 ಟನ್ ಮೀನು ಉತ್ಪಾದನೆಯ ಗುರಿಯಲ್ಲಿ 93,703 ಟನ್ ಮಾತ್ರ ಮೀನು ಬಲೆಗೆ ಬಿದ್ದಿವೆ. ಇನ್ನು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮತ್ಸ್ಯ ಉತ್ಪಾದನೆ ಮತ್ತು ಆದಾಯ ಗಳಿಕೆಯಲ್ಲಿ ಭಾರೀ ಕುಸಿತವಾಗಿದೆ.
ಕುಂದಾಪುರದಲ್ಲಿ 52,320 ಟನ್ ಮೀನು ಉತ್ಪಾದನೆಯ ಗುರಿ ಇರಿಸಲಾಗಿದ್ದು, ಶೇಕಡಾ 50ರಷ್ಟು ಮೀನು ಹಿಡಿದಿಲ್ಲ. ಕೇವಲ 23,278 ಟನ್ ಮೀನು ಬಲೆಗೆ ಬಿದ್ದಿದೆ. ಆದಾಯದಲ್ಲೂ ಗಣನೀಯವಾಗಿ ಕುಸಿತ ಕಂಡುಬಂದಿದೆ. ಹೀಗಾಗಿ ಬೋಟ್ಗಾಗಿ, ಲಕ್ಷ ಲಕ್ಷ ಬಂಡವಾಳ ಸುರಿದ ಮೀನುಗಾರರು ಲಾಭವೂ ಇಲ್ಲದೆ ಹಾಕಿದ ಬಂಡವಾಳ ವಾಪಸ್ ಪಡೆಯಲಾಗದೆ ಕೈ ಸುಟ್ಟುಕೊಳ್ಳುವಂತಾಗಿದೆ.
ಕೊರೋನಾದ ಕಟಂಕದ ನಡುವೆ ಬ್ಯಾಂಕ್ ಸಾಲ ತೀರಿಸಲಾಗಿದೆ. ಸಾಲದ ಹೊರೆಯಿಂದ ಇನ್ನಷ್ಟೂ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಆರು ತಿಂಗಳ ಕಾಲ ಮೀನು ಮಾರಾಟ ನಡೆಸಿಯೇ ಒಂದು ವರ್ಷದ ಬದುಕು ಕಟ್ಟಿ ಕೊಳ್ಳುವ ಮಹಿಳೆಯರು ಆದಾಯ ವಿಲ್ಲದೆ ಜೀವನ ನಡೆದುವುದಕ್ಕೆ ಪರದಾಡುವಂತಾಗಿದೆ. ಮೀನುಗಾರಿಕೆ ನಂಬಿ ಬದುಕು ಕಟ್ಟಿಕೊಂಡ ಮೀನುಗಾರ ನೆರವಿಗೆ ಸರ್ಕಾರ ದಾವಿಸಬೇಕಿದೆ ಎಂದು ಮೀನುಗಾರ ಮುಖಂಡ ಯಶ್ ಪಾಲ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ; ಮೀನುಗಾರರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ