ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಭಾರೀ ಮಳೆ ಸುರಿಸುತ್ತಿವೆ. ಈಗಾಗಲೇ ನದಿಗಳು ತುಂಬಿದ್ದು, ರಸ್ತೆ ಮೇಲೆ ತಮ್ಮ ಹರಿವು ಶುರು ಮಾಡಿದೆ. ಆದರೆ ಕಳೆದ ಕೆಲವು ದಿನಗಳಿಗೆ ಹೊಲಿಸಿದರೆ ಕರಾವಳಿ ಭಾಗದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ರೆಡ್ ಅಲರ್ಟ್ ಇದ್ದ ಪ್ರದೇಶಗಳಲ್ಲಿ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂಗಾರು ಆರಂಭದಲ್ಲೇ ಈ ಬಾರಿ ಆರ್ಭಟ ಜೋರಾಗಿದ್ದು, ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ ಹವಾಮಾನ ಇಲಾಖೆ
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಕೊಂಚ ಕ್ಷೀಣಿಸಿದೆ. ಜಿಲ್ಲೆಯಲ್ಲಿ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದ್ದು, ಮೋಡಮುಸುಕಿದ ವಾತಾವರಣ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹವಾಮಾನ ಇಲಾಖೆ ಶನಿವಾರ ಮಧ್ಯಾಹ್ನದ ತನಕ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಮಳೆ ಮಾರುತ ಕಡಿಮೆಯಾಗುತ್ತಿದ್ದಂತೆ, ಆರೆಂಜ್ ಅಲರ್ಟ್ ಆಗಿ ಪರಿವರ್ತನೆ ಗೊಳಿಸಲಾಗಿದೆ. ಜಿಲ್ಲೆಯಲ್ಲಿ 40ರಿಂದ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು ಅರಬ್ಬಿ ಸಮುದ್ರದ ಅಬ್ಬರ ಹೆಚ್ಚಿದೆ.
ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರುತ್ತದೆ. ಅರಬ್ಬಿ ಸಮುದ್ರದಲ್ಲಿ ವಿಪರೀತ ಗಾಳಿ ಬೀಸುತ್ತಿರುವುದರಿಂದ ನಾಡದೋಣಿ ಮೀನುಗಾರಿಕೆ ನಡೆಸುವ ಮೊಗವೀರ ಸಮುದಾಯದವರು ಸಮುದ್ರ ಮತ್ತು ನದಿಗೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮುಂಗಾರುಮಳೆ ಬೀಸುತ್ತಿದ್ದು, ಮನೆ, ಕೊಟ್ಟಿಗೆ, ಮೀನುಗಾರಿಕಾ ಶೆಡ್ಗೆ ಹಾನಿಯಾಗಿದೆ. ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಉಡುಪಿ ಜಿಲ್ಲೆಯಲ್ಲಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಮಳೆ
ಕರಾವಳಿ ಭಾಗದಲ್ಲಿ ಭಾರಿ ವರ್ಷಧಾರೆಯಾಗಿದ್ದು, ನೇತ್ರಾವತಿ, ಫಲ್ಗುಣಿ, ಕುಮಾರಧಾರ, ಫಲ್ಗುಣಿ, ನಂದಿನಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಶರವೇಗದಲ್ಲಿ ಸಮುದ್ರ ಸೇರುತ್ತಿವೆ. ಈ ಕಾರಣದಿಂದಾಗಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡದ ಕದ್ರಾ ಜಲಾಶಯದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ
ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 31.52 ಮೀಟರ್, ಗರೀಷ್ಟ ಮಟ್ಟ 34.50ಮೀಟರ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು 21416 ಕ್ಯೂಸೆಕ್ ನೀರನ್ನು ಮೂರು ಗೇಟ್ಗಳ ಮೂಲಕ ಕಾಳಿ ನದಿಗೆ ಬಿಡಲಾಗಿದೆ. ಕದ್ರಾ ಜಲಾಶಯದ ಇಂದಿನ ಒಳ ಹರಿವು 27107 ಕ್ಯುಸೆಕ್ ಆಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜಲಾಶಯದಿಂದ ನೀರು ಕಾಳಿ ನದಿಗೆ ಬಿಡಲಾಗಿದ್ದು, ತಟದಲ್ಲಿ ಇರುವ ಜನರಿಗೆ ಕೆಪಿಸಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
Karnataka Monsoon 2021: ಮೈಸೂರಿನ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ; ಮಳೆಯಿಂದ ಸಂತಸ
Karnataka Rain: ಮಳೆಯಿಂದ ಆಗುವ ಅನಾಹುತ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಸಿಎಂ ಯಡಿಯೂರಪ್ಪ ಸೂಚನೆ